ಬೈಂದೂರು: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಎರಡು ವರ್ಷದ ಮಗು ನಿದ್ದೆಯಿಂದ ಎಚ್ಚೆತ್ತು ಮನೆ ಸಮೀಪದ ನದಿ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಯಾತಪ್ಪಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಗುವನ್ನು ಉಪ್ಪುಂದ ಗ್ರಾಮದ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾರ್ವಿ ಅವರ ಮಗ ಸರ್ವದ (2) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದು, ಮನೆಯ ಕೋಣೆಯಲ್ಲಿ ಮಲಗಿದ್ದ ಮಗು ಎದ್ದು ಮನೆಯಿಂದ ಹೊರಗೆ ಬಂದು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟು, ಮೃತದೇಹವು ತೇಲಿಕೊಂಡು ಹೋಗಿ ಎಡಮಾವಿನ ಹೊಳೆಯು ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ದೊರೆತಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.