ಮುಂಬೈ: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯ ಸಹಚರ ಹಾಗೂ ಮೋಸ್ಟ್ ವಾಟೆಂಡ್ ಆಗಿದ್ದ ಶಾರ್ಪ್ ಶೂಟರ್ ಒಬ್ಬನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಸಾದೀಕ್ ಬಂಗಾಳಿ (44) ಬಂಧಿತ ಆರೋಪಿಯಗಿದ್ದಾನೆ. ಆತನಿಂದ ಒಂದು ಪಿಸ್ತೂಲ್ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಸಾದೀಕ್ ರವಿ ಪೂಜಾರಿ ಗ್ಯಾಂಗ್ ನ ಪ್ರಮುಖ ಶಾರ್ಪ್ ಶೂಟರ್ ಆಗಿದ್ದ. ಆತ ಮುಂಬೈ ರಾಜಕೀಯ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮತ್ತು ಕೆಲವೊಂದು ಕೇಸ್ ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದು ಬಂದಿದೆ. ಇನ್ನೊಂದು ಕೊಲೆ ಮಾಡಲು ಮುಂಬಯಿಗೆ ಆಗಮಿಸಿದ್ದಾನೆ ಎಂಬ ಖಚಿತ ಮಾಹಿತಿ ಆಧಾರಿಸಿ ಮುಂಬೈ ಕ್ರೈಂ ಬ್ರಾಂಚ್ ಎಇಸಿ ತಂಡ ಪೊಲೀಸ್ ಅಧಿಕಾರಿ ಸುನೀಲ್ ಪವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಸಾದೀಕ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಆತನಲ್ಲಿದ್ದ ಪಿಸ್ತೂಲ್ ಸೇರಿ ಕೆಲವೊಂದು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಈಗಾಗಲೇ ಮುಂಬೈ ಪೋಲಿಸರ ವಶದಲ್ಲಿದ್ದು, ಸಾದೀಕ್ ಬಂಧನದಿಂದ ಭೂಗತ ಜಗತ್ತಿನ ಆನೇಕ ಕರಾಳ ಕಥೆಗಳು ಹೊರಬರಲಿವೆ.