ಪುತ್ತೂರು: ಅರಣ್ಯ ಇಲಾಖೆ ವತಿಯಿಂದ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಅನೇಕ ಸವಲತ್ತುಗಳು ಇದೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಪುತ್ತೂರು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ ಬಿಟಿ ಅವರು ರೋಟರಿ ಕ್ಲಬ್ ಪುತ್ತೂರು ಯುವದಿಂದ ಆಯೋಜಿಸಿದ ಅರಣ್ಯ ಸಂರಕ್ಷಣೆ ಕುರಿತಾಗಿ ನಡೆಸಿದ ಮಾಹಿತಿ ಕಾರ್ಯಗಾರದಲ್ಲಿ ತಿಳಿಸಿದರು.
ಮಾಹಿತಿ ಕಾರ್ಯಗಾರದ ಕೆಲವು ಪ್ರಮುಖ ಅಂಶಗಳು:
ಕೃಷಿಕರು ತಮ್ಮ ತೋಟಕ್ಕೆ ಸೌರ ವಿದ್ಯುತ್ ತಂತಿ ಬೇಲಿಯನ್ನು ಅಳವಡಿಸಲು ಒಂದು ಕಿಲೋಮೀಟರಿಗೆ ಸುಮಾರು 2,30,000/- ನಿಗದಿಪಡಿಸಲಾಗಿದೆ . ಇದರಲ್ಲಿ 50% ಅರಣ್ಯ ಇಲಾಖೆಯ ವತಿಯಿಂದ ಸಹಾಯಧನದ ರೂಪದಲ್ಲಿ ಸಿಗುತ್ತದೆ. ಮಾರುಕಟ್ಟೆಯಲ್ಲಿ ಶ್ರೀಗಂಧ ಹಾಗೂ ರಕ್ತಚಂದನದ ಬೇಡಿಕೆ ಅಧಿಕವಾಗಿದೆ . ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಬೆಳೆಸಿ ಹೆಚ್ಚಿನ ಲಾಭ ಪಡೆಯಬಹುದು. ಅದನ್ನು ಕಟಾವು ಮಾಡುವ ಸಮಯದಲ್ಲಿ ಸಮೀಪದ ಅರಣ್ಯ ಇಲಾಖೆಗೆ ತಿಳಿಸತಕ್ಕದ್ದು. ಬಳಿಕ ಅರಣ್ಯ ಇಲಾಖೆ ಈ ಮರಗಳನ್ನು ಕಡಿದು ಹರಾಜು ಮೂಲಕ ಮಾರಾಟ ಮಾಡಿ ಕೃಷಿಕರಿಗೆ ನೀಡಲಾಗುವುದು.
ಸಾರ್ವಜನಿಕರು ತಮ್ಮ ಕೃಷಿಭೂಮಿ ಅಥವಾ ವಾಸ್ತವ್ಯದ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಹೆಸರಿಸಿದ ಕೆಲವು ವೃಕ್ಷಗಳನ್ನು ಉದಾಹರಣೆಗೆ ಮಾವು ನೇರಳೆ ಇತ್ಯಾದಿಗಳನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸಿಯೊಂದಕ್ಕೆ ರೂ. 1/- ಹಾಗೂ ರೂ 3/- ದರದಲ್ಲಿ ನೀಡುತ್ತಾರೆ. ಈ ರೀತಿ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟಲ್ಲಿ ಸಸಿ ಯೊಂದಕ್ಕೆ ಪ್ರಥಮ ವರ್ಷ ರೂ 35, ದ್ವಿತೀಯ ವರ್ಷ ರೂ. 40 ಹಾಗೂ ತೃತೀಯ ವರ್ಷ ರೂ.45 ರಂತೆ ಪ್ರೋತ್ಸಾಹಕ ಧನದ ರೂಪದಲ್ಲಿ ಒಟ್ಟು ರೂ. 125 ನೀಡುತ್ತಾರೆ.( ಬದುಕಿ ಉಳಿದ ಸಸಿಗಳ ಲೆಕ್ಕಾಚಾರ ಮಾಡಿ )
ರಕ್ಷಿತಾರಣ್ಯದಲ್ಲಿ ಇರುವ ವನ್ಯಜೀವಿಗಳನ್ನು ಬೇಟೆಯಾಡಿದರೆ ಹಾಗೂ ಅಲ್ಲಿರುವ ವೃಕ್ಷಗಳನ್ನು ಕಡಿದಲ್ಲಿ ಅಥವಾ ಅದರಲ್ಲಿರುವ ಹಣ್ಣುಗಳನ್ನು ಕಿತ್ತಲ್ಲಿ ದಂಡ ಹಾಗೂ ಜೈಲು ಶಿಕ್ಷೆ ಆಗುತ್ತದೆ. ಸಾರ್ವಜನಿಕರು ತಮ್ಮ ಭೂಮಿಯಲ್ಲಿ ಇರುವ ವೃಕ್ಷ ವನ್ನು ಒಂದು ವೇಳೆ ಕಡಿಯ ಬೇಕಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆದೆ ಕಡಿಯ ತಕ್ಕದ್ದು. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮನೆಯಲ್ಲಿ ಯಾವುದೇ ವನ್ಯಜೀವಿಗಳ ಕೊಂಬು ಚರ್ಮಗಳನ್ನು ಇಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಗಾಳಿಮರ, ಗೇರು, ಮಾಂಜಿಯಂ ಇತ್ಯಾದಿ ಅರಣ್ಯ ಇಲಾಖೆ ಹೆಸರಿಸಿದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ.
ವನ್ಯಜೀವಿಗಳಿಂದ ಪ್ರಾಣ ಹಾನಿಯಾದಲ್ಲಿ ಸರಕಾರದಿಂದ ರೂ.7.30 ಲಕ್ಷ ರೂಪಾಯಿ ಪರಿಹಾರ ರೂಪದಲ್ಲಿ ಮೃತರ ಕುಟುಂಬಕ್ಕೆ ಸಿಗುತ್ತದೆ. ಅರಣ್ಯ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಬೇಕಾದಲ್ಲಿ ಸಮೀಪದ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಎಂದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ ಬಿ ಟಿ ಅವರು ತಿಳಿಸಿದರು.
ಅಧ್ಯಕ್ಷ ಭರತ್ ಪೈ ಅತಿಥಿಗಳನ್ನು ಸ್ವಾಗತಿಸಿದರು, ಸತೀಶ ಕಟ್ಟಾವು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ನಿಯೋಜಿತ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಅವರು ಪ್ರಾರ್ಥಿಸಿದರು, ಕಾರ್ಯದರ್ಶಿ ಪ್ರೊ. ದೇವಿ ಚರಣ್ ರೈ ವಂದನಾರ್ಪಣೆಗೈದರು. ಝೋನಲ್ ಲೆಫ್ಟಿನೆಂಟ್ಉ ಮೇಶ್ ನಾಯಕ್, ಪೂರ್ವಾಧ್ಯಕ್ಷ ಹರ್ಷಕುಮಾರ ರೈ, ಸ್ಥಾಪಕಾಧ್ಯಕ್ಷ ರತ್ನಾಕರ ರೈ ಮುಂತಾದವರು ಉಪಸ್ಥಿತರಿದ್ದರು.