ಪುತ್ತೂರು: ಸಾಮಾಜಿಕ ಜಾಲತಾಣವಾದ ಸ್ನಾಪ್‌ಚಾಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರು ಯುವತಿ ಎಂದು ನಂಬಿಸಿ ಪುತ್ತೂರಿನ ನಿವಾಸಿಯೊಬ್ಬರಿಂದ ₹4.84 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಿದ ಘಟನೆ ಬೆಳಕಿಗೆ ಬಂದಿದೆ.
ದೂರುದಾರರ ಮಾಹಿತಿಯಂತೆ, 2025ರ ಡಿಸೆಂಬರ್‌ನಲ್ಲಿ “Annapurna Gowda 26” ಹೆಸರಿನ ಸ್ನಾಪ್‌ಚಾಟ್ ಖಾತೆಯ ಮೂಲಕ ಅಪರಿಚಿತ ವ್ಯಕ್ತಿಯೊಬ್ಬರು ಯುವತಿ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಯುವತಿಯ ಧ್ವನಿಯಲ್ಲಿ ಕರೆ ಮಾಡಿ, ಸಂದೇಶಗಳ ಮೂಲಕ ಸಂಪರ್ಕ ಬೆಳೆಸಿದ್ದಲ್ಲದೆ, ತಾನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಉದ್ಯೋಗಿಯಾಗಿರುವುದಾಗಿ ತಿಳಿಸಿದ್ದರು.
ನಂತರ ತನ್ನ ವಾಟ್ಸ್‌ಆಪ್ ಸಂಖ್ಯೆಯನ್ನು ನೀಡಿ ನಿರಂತರ ಸಂಪರ್ಕದಲ್ಲಿದ್ದ ಆರೋಪಿತರು, 2026ರ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ವಿವಿಧ ಹಣಕಾಸು ಸಮಸ್ಯೆಗಳ ನೆಪವೊಡ್ಡಿ ಹಂತ ಹಂತವಾಗಿ ಒಟ್ಟು ₹4,84,203 ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಬಳಿಕ ದೂರುದಾರರು ಹಣ ವರ್ಗಾಯಿಸಿದ ಖಾತೆ ಕುರಿತು ಸ್ನೇಹಿತರ ಮೂಲಕ ಮಾಹಿತಿ ಕಲೆಹಾಕಿದಾಗ, ತಾನು ಸಂಪರ್ಕದಲ್ಲಿದ್ದವರು ಯುವತಿ ಅಲ್ಲ, ಪುರುಷ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ದೂರುದಾರರು, ಹಣವನ್ನು ಮರಳಿ ನೀಡದೇ ನಂಬಿಕೆ ದ್ರೋಹ ಎಸಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




























