ಪುತ್ತೂರು: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ ಎಂಬಲ್ಲಿರುವ ಮಹಮ್ಮದ್ ಇಕ್ಬಾಲ್ ಎಂಬವರ ಮಾಲಕತ್ವದ ಸುಣ್ಣದ ಕಾರ್ಖಾನೆಯಿಂದ ಹೊರಡುವ ಹೊಗೆ ಹಾಗೂ ದುರ್ವಾಸನೆಯು ಅಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಿಗೆ ಆವರಿಸಿ ಅಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ಉಸಿರಾಡಲು ತುಂಬಾ ಅನಾನುಕೂಲವಾಗಿರುತ್ತದೆ ಹಾಗೂ ಪ್ರತೀ ದಿನ ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಾಲಕರಿಗೆ ನೋಟಿಸ್ ನೀಡಿದ್ದಾರೆ.
ಸುಣ್ಣದ ಕಾರ್ಖಾನೆಯಿಂದ ಹೊರಡುವ ಹೊಗೆ ಹಾಗೂ ದುರ್ವಾಸನೆಯು ಅಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಿಗೆ ಆವರಿಸಿ ಅಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ಉಸಿರಾಡಲು ತುಂಬಾ ಅನಾನುಕೂಲವಾಗಿರುತ್ತದೆ ಹಾಗೂ ಪ್ರತೀ ದಿನ ತೊಂದರೆಗಳನ್ನು ಅನುಭವಿಸಬೇಕಾಗಿದೆ. ಈ ಪ್ರದೇಶದಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಬರುವ ಸಂಭವವಿರುತ್ತದೆ ಎಂಬುದಾಗಿ ಸಾರ್ವಜನಿಕರಿಂದ ಆಗಾಗ ದೂರುಗಳು ಬರುತ್ತಿದೆ.
ಆದ್ದರಿಂದ ಈ ಕುರಿತು ತುರ್ತು ಗಮನಹರಿಸಿ ಸಾರ್ವಜನಿಕರಿಗೆ ಆರೋಗ್ಯದ ತೊಂದರೆ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೈಕಂಪಾಡಿ ಮಂಗಳೂರು ಇವರಿಂದ ದೃಢೀಕರಣ ಪತ್ರ ಪಡೆದು ಅದರಂತೆ ಕಾರ್ಯನಿರ್ವಹಿಸಲು ಹಾಗೂ ದೃಢೀಕರಣ ಪತ್ರದ ಪ್ರತಿಯನ್ನು ಪಂಚಾಯತ್‌ಗೆ ನೀಡಲು ಸೂಚಿಸಲಾಗಿದೆ.
ಪಂಚಾಯತ್ ಸೂಚನೆಯನ್ನು ಪಾಲಿಸದಿದ್ದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 66, 67, 69, 70, 109ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.