ಮಂಗಳೂರು: ಕೆಲ ಸಮಯದ ಹಿಂದಷ್ಟೇ ವಿವಾಹವಾಗಿರುವ ತಂಗಿಯ ಒಡವೆಗಳನ್ನು ಮನೆಯಿಂದಲೇ ಕದ್ದು ಅಕ್ಕ ಪರಾರಿಯಾಗಿದ್ದು, ಮಗಳು ಹಾಗೂ ಒಡವೆ ಹುಡುಕಿಕೊಡುವಂತೆ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಡವೆಯೊಂದಿಗೆ ಪರಾರಿಯಾದ ಯುವತಿಯನ್ನು ಸುರತ್ಕಲ್ ಠಾಣಾ ವ್ಯಾಪ್ತಿಯ ಇಬ್ರಾಹಿಂ ಎಂಬವರ ಪುತ್ರಿ ರಿಜ್ವಾನಾ ಎಂದು ಗುರುತಿಸಲಾಗಿದೆ. ದೂರು ನೀಡಿರುವ ಇಬ್ರಾಹಿಂ ಅವರ ಹಿರಿಯ ಪುತ್ರಿಯಾದ ರಿಜ್ವಾನಾ ಶಿಕ್ಷಕಿಯಾಗಿದ್ದು, ಗಂಡ ದುಬೈನಲ್ಲಿರುವುದರಿಂದ ಆಕೆ ತನ್ನ ತಂದೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ರಿಜ್ವಾನಾ ತಂಗಿ ರಾಝ್ವಿನಾಳಿಗೆ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದು, ಆಕೆಯ ಒಡವೆಗಳು ತಂದೆಯ ಮನೆಯಲ್ಲಿಯೇ ಇತ್ತು.
ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳಾದ ರಿಜ್ವಾನಾಳ ಬಳಿಯೇ ಇತ್ತು ಎನ್ನಲಾಗಿದೆ. ಕಳೆದ ಜುಲೈ 26 ರಂದು ಬೆಳಗ್ಗೆ ಹಣದ ಅವಶ್ಯಕತೆ ಇದ್ದ ಕಾರಣ ಒಡವೆಗಳನ್ನು ಅಡವಿರಿಸಲು ಕಪಾಟಿನ ಕೀಯನ್ನು ಇಬ್ರಾಹಿಂ ಅವರು ಕೇಳಿದಾಗ ರಿಜ್ವಾನಾ ಕೊಡಲು ನಿರಾಕರಿಸಿದ್ದಳು ಎನ್ನಲಾಗಿದೆ. ಆ ನಂತರ ಬಳಿಕ ಆಕೆ ಶಿಕ್ಷಕಿಯಾಗಿದ್ದ ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಆದರೆ ನಂತರ ಆಕೆ ತನ್ನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿ ಪರಾರಿಯಾಗಿದ್ದಾಳೆ.
ಮರುದಿನ ಕಪಾಟಿನ ಬಾಗಿಲು ಒಡೆದು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ ಎಂದು ದೂರಲಾಗಿದೆ. ವಿವಾಹಿತೆ ರಿಜ್ವಾನಾ ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಆತನೊಂದಿಗೆ ಒಡವೆ ಜೊತೆಯಲ್ಲಿ ಪರಾರಿಯಾಗಿದ್ದಾಳೆಂದು ಇಬ್ರಾಹಿಂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ಕೈಗೆತ್ತಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.