ಪುತ್ತೂರು: ಬೇಸಗೆ ರಜೆಯಲ್ಲಿ ಅಜ್ಜನ ಮನೆಗೆ ತೆರಳಿದ್ದ ಬಾಲಕನೋರ್ವ ಕಬ್ಬಿಣದ ದೋಟಿಯ ಮೂಲಕ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಮೃತಪಟ್ಟ ಘಟನೆ ಶನಿವಾರ ಕೆದಿಲ ಗ್ರಾಮದ ಗಡಿಯಾರದ ಬಳಿ ನಡೆದಿದೆ.
ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶರೀಫ್ ಅವರ ಪುತ್ರ ಶಹೀರ್(15) ಮೃತಪಟ್ಟ ಬಾಲಕ.
ಶನಿವಾರ ಬೆಳಗ್ಗೆ ದೋಟಿಯ ನೆರವಿನಿಂದ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ದೋಟಿ ವಿದ್ಯುತ್ ತಂತಿಗೆ ತಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನ ದೇಹದ ಒಂದು ಭಾಗ ಸಂಪೂರ್ಣ ಕರಟಿದಂತಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬಾಲಕ ಪುತ್ತೂರಿನ ಖಾಸಗಿ ಶಾಲೆಯೊಂದರ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಆತನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದು ಉತ್ತೀರ್ಣನಾಗಿದ್ದನು.
ರಜೆಯ ಹಿನ್ನೆಲೆಯಲ್ಲಿ ಆತನ ಅಜ್ಜ ಗಡಿಯಾರ ನಿವಾಸಿ ಪುತ್ತಾಕ ಅವರ ಮನೆಗೆ ತೆರಳಿದ್ದನು. ಮೃತ ಬಾಲಕನ ಕುಟುಂಬ ಕೊಡಾಜೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತಂದೆ-ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ಬಾಲಕನ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























