ಪುತ್ತೂರು: ಪುತ್ತೂರು ಜಾತ್ರೆಯ ಸಂದರ್ಭ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಬ್ಬರಿಗೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಅರುಣ್ ಚೌವಾನ್ ಮತ್ತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಂತೋಷ್ ಕಾಗಳೆ ಅವರು ಪುತ್ತೂರು ಜಾತ್ರೆಯ ಸಂದರ್ಭ ಏ.17ರಂದು ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಂಚಾರ ಹಿತದೃಷ್ಟಿಯಿಂದ ರೈಲ್ವೇ ಸ್ಟೇಷನ್ ರೋಡ್‌ಗೆ ಯಾವುದೇ ವಾಹನಗಳನ್ನು ಬಿಡದಂತೆ ಬ್ಯಾರಿಕೇಡ್ ಬಳಸಿ ತಾತ್ಕಾಲಿಕ ನಿರ್ಬಂಧ ವಿಧಿಸಿ ವಾಹನಗಳು ಹೋಗದಂತೆ ಬಂದೋಬಸ್ತ್ ಮಾಡುತ್ತಿದ್ದಾಗ ಕಾರೊಂದರಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ರೈಲ್ವೇ ಸ್ಟೇಷನ್ ರಸ್ತೆಗೆ ಹೋಗಲು ಬಲವಂತವಾಗಿ ಬ್ಯಾರಿಕೇಡ್ ತಳ್ಳಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಆರೋಪಿಸಿ ಅರುಣ್ ಚೌವಾನ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























