ಪುತ್ತೂರು: ಹಳೆ ಕಟ್ಟಡ ಭಾಗಶಃ ತೆರವಾದ ವಿಚಾರಕ್ಕೆ ಸಂಬಂಧಿಸಿ ಕಟ್ಟಡದ ರಿಸೀವರ್ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಕ್ತರು ಸೇರಿಕೊಂಡು ಹಳೆ ಕಟ್ಟಡವನ್ನು ತೆರವು ಮಾಡಿರುವ ಕುರಿತು ಮಾಹಿತಿ ಬಂದಿರುವಂತೆ ನಾನು ಸ್ಥಳಕ್ಕೆ ಹೋಗಿದ್ದೆ. ಈ ವೇಳೆ ಭಕ್ತರನ್ನು ಸಮಾಧಾನಿಸಿ ದೇವಸ್ಥಾನಕ್ಕೆ ವಾಪಸಾದೆ. ಈ ವೇಳೆ 11 ಗಂಟೆ ಸುಮಾರಿಗೆ ಕೇದಗೆ ಅರವಿಂದ ಎಂಬವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಈಶ್ವರ ಭಟ್ ಪಂಜಿಗುಡ್ಡೆಯವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಇದೊಂದು ಅಸಂಜ್ಞೆಯ ಪ್ರಕರಣವೆಂದು ನ್ಯಾಯಾಲಯದ ಅನುಮತಿಗಾಗಿ ಮನವಿ ಹಿಂಬರಹ ನೀಡಿದ್ದರು. ಇದೀಗ ನ್ಯಾಯಾಲಯದ ಅನುಮತಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



























