ಸುಳ್ಯ: ತರಕಾರಿ ಲಾರಿಯಲ್ಲಿ ಅಕ್ರಮ ಮರ ಸಾಗಾಟ ಪ್ರಕರಣ ಬೇಧಿಸಿರುವ ಅರಣ್ಯಾಧಿಕಾರಿಗಳ ತಂಡ ಇಬ್ಬರನ್ನು ಬಂಧಿಸಿದೆ. ಹುಣಸೂರಿನಿಂದ ಕೇರಳದ ಕಾಂಞಗಾಡ್ ಕಡೆಗೆ ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದು, ಪ್ರಕರಣವನ್ನು ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.
ಕಾಂಞಗಾಡ್ ಕುರಿಚಿಯಲ್ ನಿವಾಸಿ ಪಿ.ದನೇಶ್(28), ಕಣ್ಣೂರು ನಿವಾಸಿ ಎಂ.ರಾಹುಲ್(26) ಎಂಬವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಅಚ್ಚು (ಅಶ್ರಫ್) ವಿರಾಜಪೇಟೆಯ ನಿವಾಸಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ.
ಲಾರಿ ಹಾಗೂ ಲಕ್ಷಾಂತರ ಮೌಲ್ಯದ ಬೀಟೆ ಮರದ 23 ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪೂವಯ್ಯ.ಎ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಯಾನಂದ ಹಾಗೂ ವಲಯ ಅರಣ್ಯಾಧಿಕಾರಿ ಮಧುಸೂದನ.ಎಂ.ಕೆ. ಅವರ ಮಾರ್ಗದರ್ಶನದಲ್ಲಿ ಸಂಪಾಜೆ ತನಿಖಾ ಠಾಣೆಯಲ್ಲಿ ಕಾರ್ಯನಿರತರಾಗಿದ್ದ ಸಿಬ್ಬಂದಿ ಜನಾರ್ಧನ ಪಿ.ಡಿ ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಉಪ ವಲಯ ಅರಣ್ಯಾಧಿಕಾರಿಗಳಾದ ವಿನಯಕೃಷ್ಣ ಎಂ.ಸಿ, ಬಸವರಾಜಪ್ಪ ಎಸ್.ಹೆಚ್, ಅರಣ್ಯ ವೀಕ್ಷಕ ನಾಗರಾಜ್.ಎಸ್, ವಾಹನ ಚಾಲಕರಾದ ಶಿವಪ್ರಸಾದ್, ಭರತ ಹಾಗೂ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.