ಕುಂದಾಪುರ: ಕುಂದಾಪುರ ತಾಲೂಕು ಕಾಳಾವರ ಸಳ್ವಾಡಿಯ ಪೈನಾನ್ಸ್ ಲ್ಲಿಯೇ ಸಂಸ್ಥೆಯ ಪಾಲುದಾರನನ್ನು ಕತ್ತು ಕತ್ತರಿಸಿ ಬರ್ಭರವಾಗಿ ಕೊಲೆ ಮಾಡಿದ ಘಟನೆ ಜು.30ರಂದು ರಾತ್ರಿ ನಡೆದಿದೆ. ಸಳ್ವಾಡಿಯ ನಂದಿಕೇಶ್ವರ ಕಾಂಪ್ಲೆಕ್ಸ್‍ನಲ್ಲಿರುವ ಡ್ರೀಮ್ ಫೈನಾನ್ಸ್‍ನ ಪಾಲುದಾರ ಅಜೇಂದ್ರ ಶೆಟ್ಟಿ (33) ಕೊಲೆಯಾದ ವ್ಯಕ್ತಿ.
ಶುಕ್ರವಾರ ತಡರಾತ್ರಿಯವರೆಗೆ ಅಜೇಂದ್ರ ಶೆಟ್ಟಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು, ಸ್ನೇಹಿತರು ಹುಡುಕಾಟ ನಡೆಸಿ, ರಾತ್ರಿ 11.20ರ ಸುಮಾರಿಗೆ ಫೈನಾನ್ಸ್ ಹತ್ತಿರ ಬಂದು ನೋಡಿದಾಗ ಫೈನಾನ್ಸ್ ಕಚೇರಿ ಶೆಟರ್ ಹಾಕಿದ ಸ್ಥಿತಿಯಲ್ಲಿ ಇತ್ತು. ಶೆಟರ್ ತೆಗೆದು ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಶೆಟ್ಟಿ ಪತ್ತೆಯಾಗಿದ್ದು, ರಕ್ತದ ಮಡುವೇ ಹರಿದಿತ್ತು. ತಕ್ಷಣ ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅಜೇಂದ್ರ ಅಸುನೀಗಿದ್ದರು.
ಮೃತ ಅಜೇಂದ್ರ ಶೆಟ್ಟಿಯನ್ನು ಡ್ರ್ಯಾಗನ್ ಚಾಕುವಿನಿಂದ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ. ಚಾಕುವಿನಿಂದ ತದ್ವಾತದ್ವಾ ಕತ್ತರಿಸಲಾಗಿದ್ದು, ಭೀಕರವಾಗಿ ಕೊಲೆ ಮಾಡಲಾಗಿದೆ. ದೇಹದ ಹಲವಾರು ಕಡೆಯಲ್ಲಿ ಚಾಕುವಿನಿಂದ ಇರಿಯಲಾಗಿದೆ. ರಾತ್ರಿ ಸುಮಾರು 8.30-9.30 ಗಂಟೆಯೊಳಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿದ್ದ ಅಜೇಂದ್ರ ಶೆಟ್ಟಿ ಮತ್ತು ಮೊಳಹಳ್ಳಿ ನಿವಾಸಿ ಅನೂಪ್ ಶೆಟ್ಟಿ (34) ಪಾಲುದಾರಿಕೆಯಲ್ಲಿ ಕಳೆದ ಐದು ವರ್ಷಗಳಿಂದ ಡ್ರೀಮ್ ಫೈನಾನ್ಸ್‍ನ್ನು ನಡೆಸಲಾಗುತ್ತಿತ್ತು. ದಿನ ತಡರಾತ್ರಿಯ ತನಕವೂ ಇವರಿಬ್ಬರು ಫೈನಾನ್ಸ್‍ನಲ್ಲಿಯೇ ಇರುತ್ತಿದ್ದು, ಶುಕ್ರವಾರ ಕೂಡಾ ಇವರಿಬ್ಬರೂ ಒಟ್ಟಿಗೆ ಇದ್ದು, ಕೊಲೆಯ ಬಳಿಕ ಇನ್ನೋರ್ವ ಪಾಲುದಾರ ಅನೂಪ್ ಶೆಟ್ಟಿ ಕಣ್ಮರೆಯಾಗಿದ್ದು ಮೃತ ಅಜೇಂದ್ರ ಶೆಟ್ಟಿಯ ಕಾರಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಅನೂಪ್ ಶೆಟ್ಟಿಯ ಬುಲೆಟ್ ಬೈಕ್ ಫೈನಾನ್ಸ್ ಹತ್ತಿರ ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಅನೂಪ ಶೆಟ್ಟಿಯ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ಆರಂಭವಾಗಿದೆ.
ಕೊಲೆಯಾದ ಅಜೇಂದ್ರ ಶೆಟ್ಟಿ ಸಾರ್ವಜನಿಕ ವಲಯದಲ್ಲಿ ಉತ್ತಮ ಬಾಂಧವ್ಯ ಹೊಂದಿದ ವ್ಯಕ್ತಿಯಾಗಿದ್ದರು ಎನ್ನಲಾಗಿದೆ. ಯಾಕಾಗಿ ಈ ಕೊಲೆ ನಡೆಯಿತು ಎನ್ನುವುದು ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ಇನ್ನೋರ್ವ ಪಾಲುದಾರ ತಲೆಮರೆಸಿಕೊಂಡಿರುವುದು ಕೂಡಾ ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ. ಪಾಲುದಾರಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಬೆಳೆದು ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಅನೂಪ್ ಶೆಟ್ಟಿ ಹೊಂಡಸಿಟಿ ಕಾರಿನಲ್ಲಿ ಭಟ್ಕಳ-ಗೋಕರ್ಣ ಕಡೆ ಹೋಗಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮೃತ ಅಜೇಂದ್ರ ಶೆಟ್ಟಿ ಹಾಗೂ ಅನೂಪ್ ಶೆಟ್ಟಿ ಈ ಹಿಂದೆ ಹೈದರಬಾದ್‍ನಲ್ಲಿ ಸ್ನೇಹಿತರಾದವರು. ಅಜೇಂದ್ರ ಶೆಟ್ಟಿ ಹೈದರಬಾದ್‍ನಲ್ಲಿ ಹೋಟೆಲ್ ಮಾಡಿಕೊಂಡಿದ್ದು ಬಳಿಕ ಕೋಟೇಶ್ವರದಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಅಲ್ಲಿ ವ್ಯವಹಾರದಲ್ಲಿ ನಷ್ಟವಾಗಿ ಬಳಿಕ ಅನೂಪ್ ಶೆಟ್ಟಿ ಜೊತೆ ಪಾಲುದಾರಿಕೆಯಲ್ಲಿ ಸಳ್ವಾಡಿಯಲ್ಲಿ ಡ್ರಿಮ್ ಪೈನಾನ್ಸ್ ಆರಂಭಿಸಿದ್ದರು. ಪೈನಾನ್ಸ್ ಒಳ್ಳೆಯ ರೀತಿಯಲ್ಲಿ ನಡೆಯುತ್ತಿತ್ತು. ಪಾಲುದಾರರಿಬ್ಬರ ಬಾಂಧವ್ಯವೂ ಉತ್ತಮವಾಗಿತ್ತು ಎನ್ನಲಾಗಿದೆ. ಕಳೆದ 20 ದಿನಗಳ ಹಿಂದೆಯಷ್ಟೆ ಅಜೇಂದ್ರ ಶೆಟ್ಟಿ ಹೊಂಡಾ ಸಿಟಿ ಕಾರನ್ನು ಖರೀದಿಸಿದ್ದರು.
ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ, ಡಿವೈಎಸ್‍ಪಿ ಭೇಟಿ ನೀಡಿದ್ದಾರೆ. ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಲಾಗಿದೆ.