ಮಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯವು ಆರೋಪಿಗೆ ಆರು ಕೋಟಿ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.
ಬಲ್ಲಾಳ್ಬಾಗ್ ನಿವಾಸಿ ಅನಿಲ್ ಹೆಗ್ಡೆ ಶಿಕ್ಷೆಗೆ ಒಳಗಾದ ಆರೋಪಿ. ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರುದಾರ ಪದವಿಂಗಡಿ ಮುಗ್ರೋಡಿಯ ಡ್ಯಾನಿ ಆಂಟನಿ ಪಾವ್ ಅವರಿಗೆ ಆರೋಪಿ ಅನಿಲ್ ಹೆಗ್ಡೆ 5,15,73,798 ರೂ. ಪಾವತಿ ಮಾಡಬೇಕಾಗಿತ್ತು.
ಈ ಸಂಬಂಧ 3,00,00,000 ರೂ. ಹಾಗೂ 2,15,73,978 ರೂ. ಮೊತ್ತದ ಎರಡು ಚೆಕ್ ಗಳನ್ನು ನೀಡಿದ್ದರು. ಈ ಚೆಕ್ಗಳನ್ನು ಬ್ಯಾಂಕಿಗೆ ಹಾಕಿದಾಗ ಅನಿಲ್ ಹೆಗ್ಡೆಯವರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂದು ಚೆಕ್ಗಳು ಬೌನ್ಸ್ ಆಗಿತ್ತು. ಈ ಬಗ್ಗೆ ಡ್ಯಾನಿ ಆಂಟನಿ ಪಾವ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್ಸಿ 4ನೇ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ. ಆರೋಪಿಯು ಒಟ್ಟು 6,08,57,000 ರೂ. ದಂಡ ಮೊತ್ತಪಾವತಿ ಮಾಡಬೇಕು. ದಂಡದ ಮೊತ್ತ ಪಾವತಿ ಮಾಡಲು ತಪ್ಪಿದರೆ ಆರೋಪಿ ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದು ತೀರ್ಪು ಪ್ರಕಟಿಸಿದೆ. ದಂಡದ ಮೊತ್ತದಲ್ಲಿ 6,08,50,000 ರೂ. ಗಳನ್ನು ದೂರುದಾರರಿಗೆ ಹಾಗೂ 7,000 ರೂ.ನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಎಂ.ಪಿ.ಶೆಣೈ ವಾದ ಮಂಡಿಸಿದ್ದರು.