ಉಪ್ಪಿನಂಗಡಿ: ಮಂಗಳೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಪಡ್ಪು ಟೋಲ್ ಪ್ಲಾಜಾದಲ್ಲಿ ದುಬಾರಿ ಶುಲ್ಕ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಶುಕ್ರವಾರ ರೈತಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಮತ್ತು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಟೋಲ್ ಗೇಟುಗಳನ್ನು ತೆರೆಯಿಸಿ ಎಲ್ಲಾ ವಾಹನಗಳಿಗೂ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಟೋಲ್ ಸಂಗ್ರಹ ತಕ್ಷಣ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯರ ಸಭೆ ನಡೆಸಿದ ಬಳಿಕ ಶುಲ್ಕ ಸಂಗ್ರಹ ಆರಂಭಿಸಬೇಕು. ಬಜತ್ತೂರು ಸೇರಿದಂತೆ ನಿರಂತರ ಸಂಚಾರ ಮಾಡುವ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಮಾತುಕತೆಗೆ ಒಂದು ವಾರದ ಗಡುವು ನೀಡಿದ ಪ್ರತಿಭಟನಾಕಾರರು, ಸ್ಪಂದಿಸದಿದ್ದರೆ 3 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಟೋಲ್ ಬಂದ್ ಮಾಡುವ ಎಚ್ಚರಿಕೆ ನೀಡಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಆರಂಭಿಸಿರುವುದು ಹಾಗೂ ಸ್ಥಳೀಯರೊಂದಿಗೆ ಚರ್ಚಿಸದೆ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿದರು.
ಪ್ರಾಧಿಕಾರದ ಅಧಿಕಾರಿಗಳು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಟೋಲ್ ಗೇಟುಗಳನ್ನು ತೆರೆಯಲಾಯಿತು. ಸಂಜೆ ತನಕವೂ ಶುಲ್ಕ ಸಂಗ್ರಹ ನಡೆಯದಂತೆ ಪ್ರತಿಭಟನಾಕಾರರು ಎಚ್ಚರಿಕೆ ವಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.


























