ಪುತ್ತೂರು: ಆರ್ಯಾಪು ಸಂಪ್ಯ ಗ್ರಾಮದಲ್ಲಿನ ಸರ್ಕಾರ ಶಾಲೆಗಳಲ್ಲಿ ಕಲಿಯುತ್ತಿರುವಂತಹ ಬಡ ವಿದ್ಯಾರ್ಥಿನಿಯರಾದ ಸಿಂಚನಾ ಮತ್ತು ಕೀರ್ತನಾ ರವರ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ ಎಂಬ ಬಗ್ಗೆ ಶಿಕ್ಷಣಾಧಿಕಾರಿಯವರು ಮಾಹಿತಿ ನೀಡಿದ್ದು, ಮಾಹಿತಿಗೆ ತಕ್ಷಣ ಸ್ಪಂದಿಸಿದ ಪುತ್ತೂರಿನ ಯಶಸ್ವಿ ಉದ್ಯಮಿ, ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ರವರು ವಿದ್ಯಾರ್ಥಿನಿಯರ ಮನೆಗೆ ತೆರಳಿ ಸೋಲಾರ್ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನ ಕಲ್ಪಿಸಿಕೊಡುವ ಮೂಲಕ ಆ ಮನೆಗೆ ಬೆಳಕು ನೀಡುವಂತಹ ಕಾರ್ಯವನ್ನು ನೆರವೇರಿಸಿದ್ದಾರೆ.
ಸೀತಾರಾಮ ರೈ ಯವರು ತಮ್ಮ ಸಂಸ್ಥೆಯ ಮುಖೇನ ವಿದ್ಯುತ್ ಸಂಪರ್ಕ ವಿಲ್ಲದ ಮನೆಗೆ ಸೋಲಾರ್ ವ್ಯವಸ್ಥೆಯನ್ನು ಸ್ವತಃ ತಮ್ಮದೇ ಸ್ವಂತ ಖರ್ಚಿನಲ್ಲಿ ಒದಗಿಸಿಕೊಡುತ್ತಿದ್ದು, ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಜೀವನ ಕಳೆಯುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳನ್ನು ಗುರುತಿಸಿ ಸೋಲಾರ್ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಸೀತಾರಾಮ ರೈ ಯವರ ಈ ಮಾನವೀಯ ಜನಸೇವೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮನೆಯವರು, ನಮಗೆ ವಿದ್ಯುತ್ ಸಂಪರ್ಕವಿರಲಿಲ್ಲ ಮಕ್ಕಳಿಗೆ ಇದರಿಂದಾಗಿ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿತ್ತು, ಈಗ ಪದ್ಮಶ್ರೀ ಸೋಲಾರ್ ವತಿಯಿಂದ ಸೋಲಾರ್ ಸಂಪರ್ಕವನ್ನು ಮಾಡುವ ಮೂಲಕ ನಮ್ಮ ಕಷ್ಟಕ್ಕೆ ನೆರವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಪದ್ಮಶ್ರೀ ಸೋಲಾರ್ ನ ಸೀತಾರಾಮ ರೈ ಯವರು, ಮಾನವೀಯ ನೆಲೆಯಲ್ಲಿ ಈಗಾಗಲೇ 5,6 ಮಕ್ಕಳ ಮನೆಗಳಿಗೆ ಬೆಳಕನ್ನು ನೀಡುವ ಕಾರ್ಯವನ್ನು ಮಾಡಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದ ಮಕ್ಕಳ ಮನೆಗಳಿಗೆ ಬೆಳಕನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನದೀಪವನ್ನು ಹಚ್ಚುವ ಕೆಲಸವನ್ನು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸೀತಾರಾಮ ರೈ ಯವರು, ಈ ಮನೆಯವರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲ, ಆದ ಕಾರಣ ಈ ಮನೆಯ ಬಗ್ಗೆ ಹಾಗೂ ಇಂತಹ ಮನೆಗಳಿರುವ ಎಲ್ಲಾ ತಾಲೂಕುಗಳಲ್ಲಿ ಸಂಬಂಧ ಪಟ್ಟಂತಹ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಿಬೇಕು. ತಾಲೂಕು ಬಿ.ಓ ರವರ ಮನವಿಗೆ ಸ್ಪಂದಿಸಿ ಮನೆಗೆ ಸೋಲಾರ್ ವ್ಯವಸ್ಥೆಯನ್ನು ಮಾಡಿದ್ದೇವೆ. ಇಂತಹ ಪರಿಸ್ಥಿತಿಯ ಮನೆಗಳು ಇದ್ದರೇ ಇನ್ನು ಮುಂದಕ್ಕೂ ಪದ್ಮಶ್ರೀ ಸೋಲಾರ್ ವತಿಯಿಂದ ಹಾಗೂ ಪದ್ಮಶ್ರೀ ಗ್ರೂಪ್ ವತಿಯಿಂದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.