ಮಂಗಳೂರು: ಬಂದರಿನಲ್ಲಿ ಸೋಮವಾರ ಭಾರೀ ಸ್ಫೋಟಕ ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಈ ಸಂಬಂಧ ಓರ್ವನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಬಂದರು ಅಜೀಜುದ್ದೀನ್ ರಸ್ತೆಯ ಕಟ್ಟಡವೊಂದರ ಕೊಠಡಿಯಲ್ಲಿ 14 ವಿಧದ ಸ್ಪೋಟಗಳು ಪತ್ತೆಯಾಗಿವೆ. ಆನಂದ ಗಟ್ಟಿ ಎಂಬಾತ ಈ ಸ್ಪೋಟಕಗಳನ್ನು ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸ್ಪೋಟಕಗಳ ಒಟ್ಟು ಮೊತ್ತ ರೂ.1.11 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪೊಟ್ಯಾಶಿಯಂ ನೈಟ್ರೇಟ್ 350 ಕೆಜಿ, ವೈಟ್ ಸಲ್ಫರ್ ಪೌಡರ್ 400ಕೆಜಿ, ಪೊಟ್ಯಾಶಿಯಂ ಕ್ಲೋರೈಟ್, 395 ಕೆಜಿ, ಬೇರಿಯಂ ನೈಟ್ರೇಟ್ 50 ಕೆಜಿ, ವಿವಿಧ ತೆರನಾದ ಅಲ್ಯೂಮೀನಿಯಂ ಪೌಡರ್ 260 ಕೆಜಿ ಸೇರಿದಂತೆ ಹಲವು ವಸ್ತುಗಳನ್ನು ಆರೋಪಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ. ಸ್ಪೋಟಕಗಳನ್ನು ಯಾವ ಕಾರಣಕ್ಕಾಗಿ ಸಂಗ್ರಹಿಸಿಡಲಾಗಿತ್ತು, ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಇತ್ತೀಚಿನ ಕೆಲವು ಘಟನೆಗಳಿಂದ ಮಂಗಳೂರು ಉಗ್ರರ ತಾಣವಾಗುತ್ತಿದೆಯೇ ಎಂಬ ಅನುಮಾನ ಜನತೆಯನ್ನು ಕಾಡಲಾರಂಭಿಸಿದೆ. ವರ್ಷದ ಹಿಂದೆ ಉಗ್ರ ಪ್ರೇರಿತ ಗೋಡೆ ಬರಹದ ಮೂಲಕ ಮಂಗಳೂರು ಸುದ್ದಿಯಾಗಿತ್ತು. ಎರಡು ವಾರದ ಹಿಂದೆ ಉಗ್ರ ಸಂಘಟನೆಯೊಂದಿಗಿನ ಲಿಂಕ್ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಮಾಜಿ ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಬಿ.ಎಂ..ಭಾಷಾ ಮನೆಗೆ ಎನ್‌ಐಎ ದಾಳಿ ನಡೆಸಿತ್ತು. ಈ ತನಿಖೆ ಪ್ರಗತಿಯಲ್ಲಿರುವಾಗಲೇ ಭಾನುವಾರ ಎಸ್‌ಡಿಪಿಐ ಕಾರ್ಯಕರ್ತರ ಪುಂಡಾಟ ನಡೆದಿತ್ತು. ಹೀಗೆ ಒಂದಲ್ಲ ಒಂದು ಘಟನೆಗಳು ಮಂಗಳೂರಿನಲ್ಲಿ ನಡೆಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇದೀಗ ಮಂಗಳೂರಿನಲ್ಲಿ ಭಾರೀ ಸ್ಪೋಟಕ ಪತ್ತೆಯಾಗಿದೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.