ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅರ್ಬಿ ಕಡ್ಮಡ್ಕ ನಿವಾಸಿ ಬಡ ಕುಟುಂಬದ ನಾಗರೀಕರೋರ್ವರಿಗೆ ಎರಡು ಮೂರು ದಿನಗಳ ಕಾಲ ತೀವ್ರ ಅನಾರೋಗ್ಯ ಉಲ್ಭಣಗೊಂಡು ಅನ್ನ ನೀರು ಸೇವಿಸಲಾಗದೆ ತೊಂದರೆಗೆ ಒಳಗಾಗಿದ್ದರು. ಇಲ್ಲಿನ ಲಕ್ಕಪ್ಪಕೋಡಿ- ಅರ್ಬಿ ರಸ್ತೆ ಹದಗೆಟ್ಟ ಕಾರಣ ಚಿಕಿತ್ಸೆಯ ವ್ಯವಸ್ಥೆಗೆ ತೊಡಕಾಗಿತ್ತು,ಇದರ ಸ್ಥಳೀಯ ಮೂಲದಿಂದ ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಶ್ರೀ ಶಾರದಾ ಯುವ ವೇದಿಕೆಯ ಸಂಘಟನೆಯ ಸಂಘಟನಾ ಕಾರ್ಯದರ್ಶಿ ನರಸಿಂಹ ಶೆಟ್ಟಿಯವರು ಕರೆ ಮಾಡಿ ಸದಸ್ಯರಿಗೆ ತಿಳಿಸಿದ್ದು, ವಿಷಯ ತಿಳಿದ ತಕ್ಷಣ ಸದಸ್ಯರಾದ ಪ್ರಮಿತ್ ಶೆಟ್ಟಿ ಹಾಗೂ ಹರೀಶ್ ಕುಲಾಲ್ ರವರು ಅಲ್ಲಿಗೆ ತೆರಳಿ ಮತ್ತಿತರರ ಸಹಾಯ ಪಡೆದು ರಸ್ತೆ ಸರಿ ಇಲ್ಲದೇ ಆಂಬ್ಯುಲೆನ್ಸ್ ಬರಲು ಆಗದಿದ್ದರೂ ಅರ್ಧ ಕಿ.ಮೀ ರೋಗಿಯನ್ನು ಹೊತ್ತುಕೊಂಡು ಹೋಗಿ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ರೋಗಿ ಚೇತರಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಅನಾರೋಗ್ಯ ಪೀಡಿತ ವ್ಯಕ್ತಿ ಬಡವರಾಗಿದ್ದು , ಅಕ್ಕನೊಂದಿಗೆ ಅರ್ಬಿ ಕಡ್ಮಡ್ಕದಲ್ಲಿ ವಾಸವಾಗಿರುತ್ತಾರೆ. ಅವಿವಾಹಿತ ಅಕ್ಕ ಬೀಡಿ ಕಟ್ಟಿ ಅನಾರೋಗ್ಯ ಪೀಡಿತ ತಮ್ಮನನ್ನು ಸಾಕುವ ಮೂಲಕ ಕರುಣಾಜನಕ ಜೀವನ ಸಾಗಿಸುವ ಈ ಬಡ ಕುಟುಂಬಕ್ಕೆ ನೆರವಾದ ಶ್ರೀ ಶಾರದಾ ಯುವ ವೇದಿಕೆ ತಂಡಕ್ಕೆ ಸ್ಥಳೀಯರು ಪ್ರಶಂಸಿದ್ದಾರೆ.

ಹಲವಾರು ವರ್ಷಗಳಿಂದ ಶ್ರೀ ಶಾರದಾ ಯುವ ವೇದಿಕೆಯೂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ, ಸಂಕಷ್ಟದಲ್ಲಿರುವ ವರ್ಗಗಳಿಗೆ ಸಹಾಯ ಹಸ್ತ ನೀಡುತ್ತಾ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.