ಪುತ್ತೂರು: ಪುತ್ತೂರು ಅರುಣಾ ಚಿತ್ರಮಂದಿರದ ಬಳಿಯ ಕೆನರಾ ಬ್ಯಾಂಕ್‌ನ ಬೆಂಕಿ ಎಚ್ಚರಿಕಾ ಅಲರಂ ಮತ್ತು ಸಿಸಿಟಿವಿ ಜಂಕ್ಷನ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಜ.೪ರಂದು ಸಂಜೆ ನಡೆದಿದ್ದು. ಸಂಜೆ ಮನೆಗೆ ಹೊರಡುವ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಬೆಂಕಿ ಎಚ್ಚರಿಕಾ ಕರೆಗಂಟೆ, ಸಿಸಿ ಕ್ಯಾಮರ ಮತ್ತು ಹವಾನಿಯಂತ್ರಣದ ಜಂಕ್ಷನ್ ಬಾಕ್ಸ್ ಒಂದೇ ಕಡೆ ಇದ್ದು, ಆರಂಭದಲ್ಲಿ ಅಲ್ಲಿ ಶಾರ್ಟ್‌ಸರ್ಕ್ಯೂಟ್ ಆಗಿ ಹೊಗೆ ಕಾಣಿಸಿಕೊಂಡಿತ್ತು. ಬ್ಯಾಂಕ್‌ನ ಸಿಬ್ಬಂದಿಗಳು ಸಂಜೆ ಮನೆಗೆ ಹೊರುವ ಮುಂಚೆ ಕಚೇರಿ ಕೊಠಡಿಗಳನ್ನು ಪರಿಶೀಲಿಸುವ ಸಂದರ್ಭ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬ್ಯಾಂಕ್‌ನಿಂದ ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ಪುತ್ತೂರು ಠಾಣೆಯ ಅಧಿಕಾರಿ ಸುಂದರ, ಎ.ಎಸ್.ಐ ರುಕ್ಮಯ ಮತ್ತು ಸಿಬ್ಬಂದಿಗಳು ಬಂದು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಇರುವುದರಿಂದ ಯಾವುದೇ ಸಾಮಾಗ್ರಿಗಳು ಕೆಟ್ಟು ಹೋಗದಂತೆ ಮತ್ತು ವಿದ್ಯುತ್ ಸಂಬಂಧಿತ ಅವಘಡವಾದ್ದರಿಂದ ಇಂಗಾಲದ ಡಯಾಕ್ಸೈಡ್ ಸಿಂಪಡಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.