ಪುತ್ತೂರು: ಮನೆಯಲ್ಲಿ ತಯಾರಿಸಿದ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ ಹತ್ತು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅ.6 ರಂದು ನಡೆದಿದ್ದು, ಘಟನೆಯಿಂದ ತೀವ್ರ ಅಸ್ವಸ್ಥಗೊಂಡ ಹೊನ್ನಮ್ಮ ಮತ್ತು ದೇವಪ್ಪ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಡ್ನೂರು ಕೊಡಂಗೆ ಸಾಂತಪ್ಪರವರ ಪುತ್ರ ರಾಘವ ರವರ ಮನೆಯಲ್ಲಿ ಈ ಘಟನೆ ನಡೆದಿದ್ದು ರಾಘವ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ಕೇಶವ, ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ಮನೆ ಸಮೀಪದಲ್ಲಿ ದೊರೆತ ಅಣಬೆಯನ್ನು ಪದಾರ್ಥ ಮಾಡಿ ಮಧ್ಯಾಹ್ನ ಊಟದಲ್ಲಿ ಸೇವಿಸಿದ್ದಾರೆ. ಊಟವಾದ ಕೆಲ ಸಮಯಗಳ ಬಳಿಕ ಸೇವನೆ ಮಾಡಿದವರೆಲ್ಲರ ಆರೋಗ್ಯದಲ್ಲಿ ತೀವ್ರ ತರದ ಏರುಪೇರು ಉಂಟಾಗಿದೆ.
ಆಸ್ಪತ್ರೆಗೆ ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು.