ಬಂಟ್ವಾಳ: ಎಸ್‌ವಿಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆ ಹಾಗೂ ಅದರಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ಅ.೧೮ ರಂದು ತಡರಾತ್ರಿ ನಡೆದಿದೆ.
ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವಹಿಂದೂ ಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಅದಕ್ಕೆ ಹನುಮಂತನ ಚಿತ್ರ, ಭಗವಾಧ್ವಜ ಅಳವಡಿಸಿ ನವೀಕರಣಗೊಳಿಸಿತ್ತು. ಇದನ್ನು ಸಹಿಸದ ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಕಟ್ಟೆಯನ್ನು ಒಡೆದು ಹಾಕಿ, ಭಗವಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ರಿಟ್ಝ್ ಕಾರು ಈ ದಾರಿಯಲ್ಲಿ ಸಂಚರಿಸಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂಟ್ವಾಳ ವಿಹಿಂಪ ನ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ದೀಪಕ್ ಬಂಟ್ವಾಳ, ಸಂತೋಷ್ ಸರಪಾಡಿ, ಶಿವಪ್ರಸಾದ್ ತುಂಬೆ, ಅನಿಲ್ ಮಂಡಾಡಿ ದೂರು ನೀಡಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಮಾರ್ಗಸೂಚಿ ಕಟ್ಟೆಯು ಮೂಡಬಿದ್ರೆ, ಮಂಡಾಡಿ, ಬಿಸಿರೋಡ್‌ಗೆ ರಸ್ತೆ ಮಾರ್ಗವನ್ನು ಸೂಚಿಸುತ್ತಿತ್ತು.