ಬೆಂಗಳೂರು: ಬಸ್ ಪ್ರಯಾಣಿಕರೇ ಗಮನಿಸಿ. ಇನ್ನು ಮುಂದೆ ಬಸ್ಗಳಲ್ಲಿ ನೀವು ಮೊಬೈಲ್ ಬಳಸಿ ಜೋರು ಸದ್ದು ಮಾಡುವಂತಿಲ್ಲ. ಒಂದು ವೇಳೆ ಬಳಸಿದ್ದೇ ಆದಲ್ಲಿ ಅದಕ್ಕೆ ತಕ್ಕ ಶಾಸ್ತಿ ಆಗುವುದಂತೂ ಖಂಡಿತ.
ಹೌದು, ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರು ಮೊಬೈಲ್ ಅನ್ನು ಎಗ್ಗಿಲ್ಲದೇ ಬಳಸಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು.
ಇದರಿಂದ ಎಚ್ಚೆತ್ತ ಕೆಎಸ್ಆರ್ಟಿಸಿ ನಿಗಮ ಅಧಿಕಾರಿಗಳು ಇನ್ನು ಮುಂದೆ ಬಸ್ಗಳಲ್ಲಿ ಮೊಬೈಲ್ ಸದ್ದನ್ನು ಜೋರಾಗಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು.
ಇದನ್ನು ಗಮನಿಸಿದ ಕೆಎಸ್ಆರ್ಟಿಸಿ ನಿಗಮದ ಎಂ.ಡಿ. ಶಿವಯೋಗಿ ಕಳಸದ ಅವರು, ಇನ್ನು ಮುಂದೆ ಬಸ್ಗಳಲ್ಲಿ ಮೊಬೈಲ್ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್ ನಿರ್ವಾಹಕ ಮನವಿ ಮಾಡಬೇಕು.
ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇದೇ ಮಾದರಿಯ ಸುತ್ತೋಲೆ ಹೊರಡಿಸಿತ್ತು. ಇದೀಗ, ಕೆಎಸ್ಆರ್ಟಿಸಿಯೂ ಕೂಡ ಬಸ್ಗಳಲ್ಲಿ ಮೊಬೈಲ್ ಜೋರು ಸದ್ದು ಮಾಡುವುದನ್ನು ನಿಷೇಧಿಸಿದೆ. ಕರ್ನಾಟಕ ಮೋಟಾರ್ ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ ಇದು ಕಾನೂನು ಬಾಹಿರವಾಗಿದ್ದು, ಬಸ್ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧವಿದೆ.