ಚಿಕ್ಕಮಗಳೂರು: ಬಾಬಾಬುಡನ್ ಗಿರಿಯ ಪ್ರಸಿದ್ಧ ಯಾತ್ರಾ ಸ್ಥಳ ದತ್ತಪೀಠಕ್ಕೆ ಹೊರಟಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಕೋಲಾರದ ಶ್ರೀರಾಮ ಸೇನೆಯ ಕಾರ್ಯಕರ್ತರು ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ಒಂದು ಮಿನಿ ಬಸ್ನಲ್ಲಿ ಹೊರಟಿದ್ದರು.
ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದು ವಸೀಂ ಬೇಗ್ ಎಂಬುವವನಿಗೆ ರೌಡಿಶೀಟರ್ಗಳಾದ ಅಕ್ಬರ್, ಎಜಾಜ್ ಮತ್ತು ಜುಮ್ಮು ಎಂಬುವವರಿಂದ ಚಾಕು ಇರಿತವಾಗಿತ್ತು. ಈ ಪ್ರಕರಣದಲ್ಲಿ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ಸ್ಥಳದಲ್ಲಿ ಜನರು ಗುಂಪು ಸೇರಿದ್ದರು.
ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತ ಮಾಲಾಧಾರಿಗಳಿದ್ದ ಬಸ್ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಇದ್ದಕ್ಕಿದಂತೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೇ ಬಸ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದತ್ತ ಮಾಲಾಧಾರಿಗಳಿದ್ದ ಬಸ್ ಅಲ್ಲಿಂದ ತಕ್ಷಣ ಹೊರಟಿತ್ತು. ಆದರೂ ಕೂಡ ಬಸ್ನಲ್ಲಿದ್ದ ಮೂವರಿಗೆ ಗಾಯಗಳಾಗಿದೆ. ವಿಷಯ ತಿಳಿದ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಶ್ರೀರಾಮ ಸೇನೆ ಕಾರ್ಯಕರ್ತರು/ದತ್ತ ಮಾಲಾಧಾರಿಗಳು ಕೋಲಾರ ನಗರ ಠಾಣೆ ಎದುರು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು ಎಂದು ತಿಳಿದು ಬಂದಿದೆ.