ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಾಣವಾಯುವಿಗೆ ಸಂಚಕಾರ ಬಂದೊದಗಿದೆ. ಭೀಕರತೆ ಪಡೆದುಕೊಂಡಿರುವ ವಿಷಯುಕ್ತ ಗಾಳಿಗೆ ದೆಹಲಿ ಬೆಚ್ಚಿ ಬಿದ್ದಿದೆ. ಉಸಿರಾಡೋಕು ಕಷ್ಟವಾಗ್ತಿದ್ದು, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸ್ತಿದೆ. ದಟ್ಟ ಹೊಗೆ ದೆಹಲಿ ಮಂದಿಯ ಉಸಿರು ನಿಲ್ಲಿಸ್ತಿದೆ. ಮನೆಯ ಒಳಗಿರೋಕು ಆಗದೆ, ಹೊರಬರೋಕು ಆಗದೆ ಜನ ಹೈರಾಣಾಗಿದ್ದಾರೆ. ಆಕ್ಸಿಜನ್ ಎಮರ್ಜೆನ್ಸಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಾಕ್ಡೌನ್ ಭೀತಿ ಕಾಡ್ತಿದೆ.
ದೆಹಲಿಯಲ್ಲಿ ‘ಏರ್ ಎಮರ್ಜೆನ್ಸಿ’ ಲಾಕ್ಡೌನ್ ಆತಂಕ
ಕೊರೊನಾದಂತಹ ಮಹಾಮಾರಿ ಬಮದಾಗಲೂ ಇಷ್ಟೊಂದು ಭೀಕರ ಪರಿಸ್ಥಿತಿ ಇರಲಿಲ್ಲ. ಲಾಕ್ಡೌನ್ ಅನ್ಕೊಂಡು ಮನೆಯಲ್ಲಿ ಕೂರಬಹುದಿತ್ತು. ಆದ್ರೆ ರಾಷ್ಟ್ರ ರಾಜಧಾನಿಗೆ ಅದಕ್ಕಿಂತಲೂ ಭೀಕರ ಪರಿಸ್ಥಿತಿ ಕಾಡುತ್ತಿದೆ. ಉಸಿರಾಡೋಕು ಆಗ್ತಿಲ್ಲ. ಗಾಳಿಯ ಸೇವನೆಯೇ ವಿಷವಾಗಿದೆ. ಎಷ್ಟರಮಟ್ಟಿಗೆ ಅಂದ್ರೆ, ದೆಹಲಿಯಲ್ಲಿ ಒಂದು ದಿನ ಉಸಿರಾಡಿದ ವ್ಯಕ್ತಿ ಬರೋಬ್ಬರಿ 20 ಸಿಗರೇಟ್ ಸೇವನೆ ಮಾಡಿದಂತೆ ಅಂತ ಖುದ್ದು ದೆಹಲಿ ಸರ್ಕಾರವೇ ಹೇಳಿದೆ. ಇದು ದೆಹಲಿ ಮಂದಿಯನ್ನ ಬೆಚ್ಚಿ ಬೀಳಿಸಿದ್ದು, ವಾಯು ಮಾಲಿನ್ಯದ ಭೀಕರತೆಗೆ ಸಾಕ್ಷಿಯಾಗಿದೆ.
ವಾಯು ಮಾಲಿನ್ಯ ಬಗ್ಗೆ ಸುಪ್ರಿಂ ಕೋರ್ಟ್ ದೆಹಲಿ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಮುಂದೆ ಗಂಭೀರ ಪರಿಸ್ಥಿತಿ ಇರೋದನ್ನ ದೆಹಲಿ ಸರ್ಕಾರ ಕೂ ಒಪ್ಪಿಕೊಂಡಿದೆ. ಉಸಿರು ಕಟ್ಟುವ ಭೀಕರ ಪರಿಸ್ಥಿತಿಯಿಂದ ಪಾರಾಗಲು ದೆಹಲಿ ಸರ್ಕಾರ ಶಾಲೆ ಬಂದ್, ಕಾಮಗಾರಿ ಸ್ಥಗಿತ, ವರ್ಕ್ಫ್ರಮ್ ಹೋಮ್ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನೂ ತೆಗೆದುಕೊಂಡಿದೆ.
ಸೋಮವಾರದಿಂದ 1 ವಾರದವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಕಾಮಗಾರಿ ಚಟುವಟಿಕೆಗಳನ್ನೂ ಕೂಡ ಬಂದ್ ಮಾಡಲಾಗಿದೆ. ಶೇ. 100ರಷ್ಟು ಸರ್ಕಾರಿ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೂ ವರ್ಕ್ ಫ್ರಮ್ ಹೋಮ್ಗೆ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ.
ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಕಂಪ್ಲೀಟ್ ಲಾಕ್ಡೌನ್ ಬಗ್ಗೆ ಸುಪ್ರಿಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಸಲಹೆ ನೀಡಿದೆ. ಆದ್ರೆ ಈ ಬಗ್ಗೆ ಮುಂದಿನ 2-3 ದಿನಗಳಲ್ಲಿ ತಜ್ಞರು ಹಾಗೂ ಕೇಂದ್ರದ ಜೊತೆಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಅಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸಿದ್ರೆ ಸುಪ್ರಿಂ ಕೋರ್ಟ್ ದೆಹಲಿಯನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲು ಸಾಧ್ಯವಿದೆಯೇ ಅಂತ ಪದೇ ಪದೇ ಪ್ರಶ್ನಿಸಿದೆ. ಈ ಬಗ್ಗೆ ನಾನು ತಜ್ಞರ ಜೊತೆಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿ ಸಂಪೂರ್ಣ ವರದಿ ತಯಾರಿಸಿ ಸುಪ್ರಿಂ ಕೋರ್ಟ್ಗೆ ನೀಡಲಿದ್ದೇವೆ. ಲಾಕ್ಡೌನ್ ಅನ್ನುವುದು ಕಡೆಯ ಅಸ್ತ್ರ ಎಂದಿದ್ದಾರೆ.