ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾಗಿದ್ದಾರೆ. ಮಂಗಳವಾರ (ನ.16) ಬೆಳಗ್ಗೆ ಈ ಭೀಕರ ಆ್ಯಕ್ಸಿಡೆಂಟ್ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 4 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯಿಂದ ಸುಶಾಂತ್ ಅಭಿಮಾನಿಗಳಿಗೆ ತೀವ್ರ ಆಘಾತ ಆಗಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಈ ಅಪಘಾತ ಸಂಭವಿಸಿದೆ. ಸುಶಾಂತ್ ಕುಟುಂಬದ ಸದಸ್ಯರು (Sushant Singh Rajput Family) ಸೇರಿ ಒಟ್ಟು 10 ಮಂದಿ ಪ್ರಯಾಣಿಸಿದ್ದ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ.
ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದರು..!!
ಸುಶಾಂತ್ ಸಿಂಗ್ ರಜಪೂತ್ ಅವರ ಭಾವ ಒ.ಪಿ. ಸಿಂಗ್ ಅವರ ಸಹೋದರಿ ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಮುಗಿಸಿದ ಬಳಿಕ ಕುಟುಂಬದವರೆಲ್ಲ ಪಾಟ್ನಾದಿಂದ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿರುವುದು ವಿಷಾದನೀಯ. ‘ಟ್ರಕ್ ಮತ್ತು ಕಾರಿನ ನಡುವೆ ಭೀಕರವಾಗಿ ಡಿಕ್ಕಿ ಆಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕ ಆಗಿದೆ’ ಎಂದು ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
6 ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಅವರನ್ನು ಪಾಟ್ನಾಗೆ ಕಳಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಲಖಿಸರಾಯ್ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರನ್ನು ಬಾಬಿ ದೇವಿ, ಅನಿತಾ ದೇವಿ, ಲಾಲ್ಜಿತ್ ಸಿಂಗ್, ಅಮಿತ್ ಶೇಖರ್, ರಾಮಚಂದ್ರ ಸಿಂಗ್ ಹಾಗೂ ಚಾಲಕ ಪ್ರೀತಂ ಎಂದು ಗುರುತಿಸಲಾಗಿದೆ.
ಸುಶಾಂತ್ ನಿಧನದ ನೋವು ಇನ್ನೂ ಹಸಿಯಾಗಿ ಇರುವಾಗಲೇ ಅವರ ಕುಟುಂಬದ 6 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಅಭಿಮಾನಿಗಳಿಗೆ ತೀವ್ರ ಆಘಾತ ಮಾಡಿದೆ.