ಉಪ್ಪಿನಂಗಡಿ: ಫಾಸ್ಟ್‌ಫುಡ್ ಗಾಡಿಯಲ್ಲಿ ಕಬಾಬ್‌ಗೆ 20 ರೂ. ಹೆಚ್ಚುವರಿ ಪಡೆಯಲಾಗಿದೆ ಎಂಬ ಕಾರಣಕ್ಕಾಗಿ ಅಲ್ಲಿ ಕೆಲಸಕ್ಕಿರುವ ಯುವಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ನ.17ರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ನೆಕ್ಕಿಲಾಡಿ ಆದರ್ಶನಗರದ ನಿವಾಸಿ ಪದವಿ ವಿದ್ಯಾರ್ಥಿ ಮುಹಮ್ಮದ್ ಬಾತಿಷಾ (20) ಎನ್ನಲಾಗಿದೆ.
ಬಾತಿಷಾ ಸಂಜೆಯ ಬಳಿಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಠದ ಇಲ್ಯಾಸ್ ಎಂಬವರ ಫಾಸ್ಟ್‌ಫುಡ್ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದು, ನ.17 ರಂದು ರಾತ್ರಿ ಕೆಲಸ ಮಾಡುತ್ತಿದ್ದಾಗ ಇನೋವಾ ಹಾಗೂ ರಿಡ್ಜ್ ಕಾರಿನಲ್ಲಿ ಅಪರಿಚಿತ ತಂಡವೊಂದು ಬಂದಿದ್ದು, ಅದರಿಂದ ಇಳಿದ ನಾಲ್ವರು ನಮ್ಮ ಪೈಕಿಯವರೋರ್ವರಲ್ಲಿ ಕಬಾಬ್‌ಗೆ ನೀವು 20 ರೂ. ಜಾಸ್ತಿ ತೆಗೆದುಕೊಂಡಿದ್ದೀರಿ ಎಂದು ತಗಾದೆ ತೆಗೆದು, ಜಗಳಕ್ಕೆ ಇಳಿದಿದ್ದರು. ಆಗ ನಾವು ಆ ರೀತಿ ಮಾಡಲಿಲ್ಲ ಎಂದು ಫಾಸ್ಟ್‌ಫುಡ್ ಗಾಡಿಯವರು ಹೇಳಿದ್ದು, ಒಂದು ವೇಳೆ ಕಣ್ತಪ್ಪಿನಿಂದ ಆಗಿದ್ದರೆ ಆ ಹಣವನ್ನು ವಾಪಸ್ ಕೊಡುತ್ತೇವೆ. ನೀವು ಜಗಳ ಮಾಡಬೇಡಿ ಎಂದು ತಿಳಿಸಿದ್ದರು. ಆದರೂ ಅದನ್ನು ಕೇಳಿಸಿಕೊಳ್ಳದ ತಂಡವು ಮತ್ತಷ್ಟು ಮಾತಿನ ಚಕಮಕಿಗೆ ಮುಂದಾದಾಗ ಅಲ್ಲೇ ಇದ್ದ ಗ್ರಾಹಕರೋರ್ವರು 20 ರೂಪಾಯಿಗಾಗಿ ನೀವು ಜಗಳ ಮಾಡಬೇಡಿ. ಅದನ್ನು ನಾನು ನಿಮಗೆ ಕೊಡುತ್ತೇನೆ ಎಂದಿದ್ದರು. ಆಗ ಆ ಗುಂಪು ಅವರಿಗೆ ಹೊಡೆಯಲು ಮುಂದಾಗಿದ್ದು, ಆಗ ಅಡ್ಡ ಬಂದ ಮುಹಮ್ಮದ್ ಬಾತಿಷನ ಮೇಲೆ ಕಾರಿನಲ್ಲಿದ್ದ ಗುಂಪು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಾತಿಷ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.