ಭಾರತೀಯ ಕ್ರಿಕೆಟ್ ತಂಡದ ಏಕದಿನ ನಾಯಕತ್ವದ ಬಗ್ಗೆ ಕಳೆದೊಂದು ತಿಂಗಳುಗಳಿಂದ ಹರಿದಾಡುತ್ತಿದ್ದ ಗಾಸಿಪ್ಗೆ ತೆರೆ ಬಿದ್ದಿದೆ. ನಿರೀಕ್ಷೆಯಂತೆ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ತೆಗೆದು ಹಾಕಲಾಗಿದೆ.
ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ಸಲುವಾಗಿ ಬಿಸಿಸಿಐ ರೋಹಿತ್ ಶರ್ಮಾಗೆ ಭಾರತ ಟೆಸ್ಟ್ ತಂಡದ ನೂತನ ಉಪನಾಯಕನಾಗಿ ಮತ್ತು ಭಾರತ ಏಕದಿನ ಕ್ರಿಕೆಟ್ ತಂಡ ನೂತನ ನಾಯಕನಾಗಿ ನೇಮಕ ಮಾಡಿದೆ.
ಟೀಮ್ ಇಂಡಿಯಾ ಆಯ್ಕೆ ಸಮಿತಿ ಬುಧವಾರ ಸಭೆ ನಡೆಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಯುಗ ಮುಕ್ತಾಯವಾಗುತ್ತಾ ಬರುತ್ತಿದ್ದು, ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.
ಹೀಗಿರುವಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರಾಟ್ ಕೊಹ್ಲಿ ಅವರಿಗೆ ಸ್ವಯಂ ಪ್ರೇರಿತವಾಗಿ ಏಕದಿನ ನಾಯಕತ್ವದಿಂದ ಕೆಳಗಿಳಿಯಲು 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ.
ಹೌದು, ಪಿಟಿಐ ಮಾಡಿರುವ ವರದಿಯ ಪ್ರಕಾರ, ಕೊಹ್ಲಿ ಅವರ ಬಳಿ 48 ಗಂಟೆಗಳ ಒಳಗೆ ಏಕದಿನ ನಾಯಕತ್ವದಿಂದ ನೀವಾಗಿಯೇ ಕೆಳಗಿಳಿಯಿರಿ ಎಂದು ಬಿಸಿಸಿಐ ಕೇಳಿತ್ತು. ಆದರೆ, ಕೊಹ್ಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದಾದ 49ನೇ ಗಂಟೆಗೆ ಬಿಸಿಸಿಐ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನೂತಕ ಏಕದಿನ ನಾಯಕ ಎಂದು ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಬಹಳ ಅಗ್ರೆಸಿವ್ ಆಟಗಾರ. ನಾಯಕನಾಗಿಯೂ ಬಹಳ ಅಗ್ರೆಸಿವ್. ಎಂಎಸ್ ಧೋನಿ ನಂತರ ಅವರು ಮೂರೂ ಮಾದರಿ ಕ್ರಿಕೆಟ್ನ ತಂಡಗಳಿಗೆ ನಾಯಕರಾಗಿ ಬಹಳ ಪಂದ್ಯಗಳನ್ನ ಆಡಿದ್ದಾರೆ. ತಂಡಕ್ಕೆ ಹೊಸ ರೂಪ ಕೊಟ್ಟಿದ್ಧಾರೆ. ತಂಡದ ಬಾಡಿ ಲಾಂಗ್ವೇಜ್ ಬದಲಿಸಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಭಾರತ ಯಾವ ಐಸಿಸಿ ಟೂರ್ನಿಯನ್ನೂ ಜಯಿಸಲಾಗಲಿಲ್ಲ ಎಂಬುದು ಕಪ್ಪು ಚುಕ್ಕೆಯಾಗಿದೆ.
ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಏಕದಿನ ಪಂದ್ಯಗಳಲ್ಲಿ ರನ್ಗಳ ಹೊಳೆಯ್ನೂ ಹರಿಸಿದ್ದಾರೆ. 72.65 ಸರಾಸರಿಯಲ್ಲಿ 5,449 ರನ್ ಗಳಿಸಿದ್ದಾರೆ. 21 ಶತಕ ಭಾರಿಸಿದ್ದಾರೆ. ಶತಕದ ವಿಚಾರದಲ್ಲಿ ರಿಕಿ ಪಾಂಟಿಂಗ್ ಬಿಟ್ಟರೆ ಎರಡನೇ ಸ್ಥಾನ ವಿರಾಟ್ ಕೊಹ್ಲಿಯದ್ದು. ಕೊಹ್ಲಿ ನಾಯಕರಾಗಿ ಐಸಿಸಿ ಟೂರ್ನಿಗಳನ್ನ ಜಯಿಸಿದೇ ಇದ್ದರೂ ತಂಡ ಆ ಟೂರ್ನಿಗಳಲ್ಲಿ ಉತ್ತಮ ಸಾಧನೆಯನ್ನಂತೂ ಮಾಡಿದೆ. ಅವರ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತು. 2019ರ ಓಡಿಐ ವಿಶ್ವಕಪ್ನ ಸೆಮಿಫೈನಲ್ ಹಂತ ತಲುಪಿತ್ತು.