ನೆಲ್ಯಾಡಿ: ಮದುವೆ ವಾರ್ಷಿಕೋತ್ಸವದ ದಿನ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನೆಲ್ಯಾಡಿ ಬಳಿ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಡಿ.16 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಅತ್ರಿಮಜಲು ನಿವಾಸಿ ದಿನೇಶ ಎಂಬವರ ಪತ್ನಿ ಗೀತಾ(30)ಎನ್ನಲಾಗಿದೆ.
ಡಿ.15 ರಂದು ದಿನೇಶ್ ಮತ್ತು ಗೀತಾ ರವರ ಮದುವೆ ವಾರ್ಷಿಕೋತ್ಸವದ ದಿನವಾಗಿತ್ತು. ಹೀಗಾಗಿ ಅವರು ಅಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತ ಬೈಕ್ ನಲ್ಲಿ ತೆರಳಲು ನಿರ್ಧರಿಸಿದ್ದು, ಬೆಳಿಗ್ಗೆ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ದ್ವಿಚಕ್ರ ವಾಹನ ರಸ್ತೆಯ ಬದಿ ಮುಗುಚಿಬಿದ್ದಿದೆ.
ಈ ವೇಳೆ ಹಿಂಬದಿ ಸವಾರೆಯಾಗಿದ್ದ ಗೀತಾ ರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಗೀತಾ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೇ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



























