ವಿಟ್ಲ: ದೈವಸ್ಥಾನಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಬಿಲ್ಲವ ಸಮಾಜದ ಯುವಕರನ್ನು ಹೊರಗೆ ಕಳುಹಿಸಿದ ಘಟನೆ ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ
ನಡೆದಿದೆ ಎಂದು ತಿಳಿದು ಬಂದಿದೆ.
ಗ್ರಾಮದ ಪಿಲಿಂಜ ಎಂಬಲ್ಲಿ ನೂತನ ದೈವಸ್ಥಾನ ನಿರ್ಮಾಣಗೊಂಡಿದ್ದು, ಪ್ರತಿಷ್ಠಾಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗ್ರಾಮ ಸಂಬಂಧಿತ ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸುವ ವೇಳೆ ಘಟನೆ ನಡೆದಿದೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೊಂದಿಗೆ ಬಿಲ್ಲವ ಸಮಾಜದ ಇಬ್ಬರು ಯುವಕರು ಇತರರೊಂದಿಗೆ ತೆರಳಿದ್ದು, ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಬಳಿ ಬಂದು ದೈವಸ್ಥಾನದ ಒಳಾಂಗಣಕ್ಕೆ ಬಿಲ್ಲವರು ಬರುವಂತಿಲ್ಲ ಎಂದು ತಿಳಿಸಿದ್ದರು. ಇದು ಯುವಕರ ಗಮನಕ್ಕೆ ಬಂದಿದ್ದು, ಯುವಕರು ಈ ವಿಚಾರವನ್ನು ಬಿಲ್ಲವ ಸಮಾಜದ ಬಂಧುಗಳಲ್ಲಿ ತಿಳಿಸಿದ್ದು, ಇದೇ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು.
ಈ ನಡುವೆ ಯುವಕರನ್ನು ಕರೆದುಕೊಂಡು ಹೋಗಿದ್ದ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ.
ಬಿಲ್ಲವ ಗ್ರೂಪುಗಳಲ್ಲಿ ವಿಚಾರ ಚರ್ಚೆಗೆ ಬಂದಿದ್ದು, ಶನಿವಾರ ಸಂಜೆ ಕುಂಡಡ್ಕ, ವಿಟ್ಲ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿಟ್ಲ ಯುವವಾಹಿನಿ ಸದಸ್ಯರು ಖಂಡನಾ ಸಭೆ ನಡೆಸಿದ್ದವು.
ಮತ್ತೆ ದೂರವಾಣಿ ಮೂಲಕ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ವ್ಯಕ್ತಿಗೆ ಮಾತನಾಡಿದ್ದು, ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿದ್ದ ಕ್ರಮ ಇದಾಗಿದೆ, ಆದರೆ ಹೊರಗಿನಿಂದ ಬರುವವರನ್ನು ಹೋಗಿ ಎಂದು ಹೇಳಿಲ್ಲ, ಒಂದು ವೇಳೆ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಹೇಳಿದರು. ಆದರೆ ಬ್ರಹ್ಮಕಲಶೋತ್ಸವದ ಅಧ್ಯಕ್ಷರು ಈ ವಿಚಾರಕ್ಕೆ ನನಗೂ ಸಂಬಂಧವಿಲ್ಲ ಎಂದು ತನ್ನ ವರ್ತನೆ ಸಮರ್ಪಕವೆಂದೇ ಸಮರ್ಥಿಸಿಕೊಂಡಿದ್ದು ಬಿಲ್ಲವ ಸಮುದಾಯ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬಿಲ್ಲವರು ಪ್ರವೇಶಿಸುವುದು, ನಿರ್ಬಂಧ ಹೇರಿದರೆ ಎಲ್ಲಾ ರೀತಿಯ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂಬ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ.