ಕಳೆದ 20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಕಾಡು ಅಲೆಯುತ್ತಾ ನಕ್ಸಲ್ ಸಂಘಟನೆಯನ್ನು ಬಲಪಡಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ಕೃಷ್ಣಮೂರ್ತಿಯ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆ.
ಈ ಮೂಲಕ ಮಲೆನಾಡಿನ ನಕ್ಸಲ್ ಹೋರಾಟದ ಕೊನೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಪ್ರಭಾ ಶರಣಾಗತಿಯ ಮೂಲಕ ಕಟ್ಟರ್ ನಕ್ಸಲರು ಕೂಡ ತಮ್ಮ ಹಾದಿಯಲ್ಲಿ ಯಶಸ್ಸು ಸಿಗದು ,ಕಾಡಿನ ಹೋರಾಟಕ್ಕಿಂತ ನಾಡಿನ ನಡುವಿನ ಹೋರಾಟವೇ ಮೇಲು ಎಂದು ಭಾವಿಸಿದಂತೆ ಕಾಣುತ್ತಿದೆ.
ಹೊಸಗದ್ದೆ ಪ್ರಭಾ ಶರಣಾಗತಿಯ ಮೂಲಕ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್ ಬಿದ್ದಂತಾಗಿದೆ. ಆದರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನಕ್ಸಲ್ ಬಿ. ಜಿ. ಕೃಷ್ಣಮೂರ್ತಿ ಕೇರಳದ ವೈಯನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ ಸಿಕ್ಕರೆ, ಇತ್ತ ಆತನ ಸಂಗಾತಿ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆಂದರೆ ಈ ಇಬ್ಬರು ತಮ್ಮ ಸಂಗಾತಿಗಳೊಂದಿಗೆ ಕರ್ನಾಟಕ ತೊರೆದು ಬೇರೆ ಕಡೆ ಬೇರೂರಿ ಬಹಳ ಸಮಯವಾಗಿದೆ ಎಂಬುದು ಕೂಡ ಬೆಳಕಿಗೆ ಬಂದಂತಾಗಿದೆ.