ಬೆಂಗಳೂರು: ಕಬಡ್ಡಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ ದಿನ ಇನ್ನೇನು ಬಂದೇ ಬಿಟ್ಟಿದೆ. ಕೊರೋನಾ ಸೋಂಕಿನಿಂದಾಗಿ (Coronavirus) 2 ವರ್ಷ ನಡೆಯದ ಪ್ರೊ ಕಬಡ್ಡಿ ಲೀಗ್‌ಗೆ (Pro Kabaddi League) ಬುಧವಾರ ಚಾಲನೆ ಸಿಗಲಿದೆ. 8ನೇ ಆವೃತ್ತಿಯ ಎಲ್ಲಾ 137 ಪಂದ್ಯಗಳಿಗೆ ಬೆಂಗಳೂರಿನ (Bengaluru) ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಆತಿಥ್ಯ ವಹಿಸಲಿದೆ. ಬರೋಬ್ಬರಿ 3 ತಿಂಗಳುಗಳ ಕಾಲ ಬಯೋಬಬಲ್‌ನೊಳಗೆ (Bio-Bubble) ಉಳಿಯಲಿರುವ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಟೂರ್ನಿಯ ಮೊದಲಾರ್ಧ(66 ಪಂದ್ಯಗಳು)ದ ವೇಳಾಪಟ್ಟಿಯನ್ನಷ್ಟೇ ಆಯೋಜಕರು ಪ್ರಕಟಿಸಿದ್ದು, ಉಳಿದ 66 ಲೀಗ್ ಪಂದ್ಯಗಳ ಹಾಗೂ 5 ಪ್ಲೇ-ಆಫ್ಸ್‌ಗೆ ಪಂದ್ಯಗಳ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದಾರೆ.
ನಿತ್ಯ ಕೋವಿಡ್ ಪರೀಕ್ಷೆ:
ಆಟಗಾರರು, ಸಹಾಯಕ ಸಿಬ್ಬಂದಿ, ರೆಫ್ರಿಗಳು ಸೇರಿ ಬಯೋಬಬಲ್‌ನೊಳಗೆ ಇರುವ ಪ್ರತಿಯೊಬ್ಬರೂ ಪ್ರತಿ ನಿತ್ಯ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಇರಬೇಕು ಎಂದು ಸೂಚಿಸಲಾಗಿದೆ. ರೂಂನೊಳಗೆ, ಆಹಾರ ಸೇವನೆ, ಜಿಮ್/ಅಭ್ಯಾಸ ಹಾಗೂ ಪಂದ್ಯದ ಸಮಯದಲ್ಲಿ ಮಾತ್ರ ಮಾಸ್ಕ್ ತೆಗೆಯಲು ಅವಕಾಶ ನೀಡಲಾಗಿದೆ. ಆಟಗಾರರು, ಸಿಬ್ಬಂದಿ ಉಳಿದುಕೊಂಡಿರುವ ಮಹಡಿಗಳಲ್ಲಿ ಪ್ರತ್ಯೇಕ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಬಯೋಬಬಲ್ ನಿಮಯ ಉಲ್ಲಂಘನೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಟೂರ್ನಿಯ ಮಾದರಿ ಹೇಗೆ..?
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಉಳಿದ 11 ತಂಡದ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಅಂದರೆ ಲೀಗ್ ಹಂತದಲ್ಲಿ ಪ್ರತಿ ತಂಡ ತಲಾ 22 ಪಂದ್ಯಗಳನ್ನು ಆಡಲಿವೆ. ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್ಸ್‌ಗೆ ಪ್ರವೇಶಿಸಲಿವೆ.ಪ್ಲೇ-ಆಫ್ಸ್‌ನಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೇರಲಿವೆ. ಇನ್ನುಳಿದ 4 ತಂಡಗಳು ಎಲಿಮಿನೇಟರ್ ಪಂದ್ಯಗಳನ್ನು ಆಡಲಿವೆ. ಎಲಿಮಿನೇಟರ್ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್‌ನಲ್ಲಿ ಸೆಣಸಲಿದ್ದು, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಸೆಮೀಸ್‌ನಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಲೀಗ್‌ನಲ್ಲಿ 10ಕ್ಕೂ ಹೆಚ್ಚು ಕನ್ನಡಿಗರು ಕಣಕ್ಕೆ:
8ನೇ ಆವೃತ್ತಿಯಲ್ಲಿ ಕರ್ನಾಟಕದ ಅನುಭವಿ ಹಾಗೂ ಯುವ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ನಲ್ಲಿ ಸುಕೇಶ್ ಹೆಗ್ಡೆ, ಸಚಿನ್ ವಿಠ್ಠಲ, ಮನೋಜ್ ಗೌಡ, ದರ್ಶನ್.ಜೆ ಇದ್ದಾರೆ. ಈ ತಂಡಕ್ಕೆ ಹಿರಿಯ ಕೋಚ್ ಬಿ.ಸಿ.ರಮೇಶ್ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಜೈಪುರ ತಂಡದಲ್ಲಿ ಪವನ್ ಟಿ.ಆರ್ ಸ್ಥಾನ ಪಡೆದಿದ್ದಾರೆ. ಪಾಟ್ನಾ ಪೈರೇಟ್ಸ್ ತಂಡವನ್ನು ಪ್ರಶಾಂತ್ ರೈ ಮುನ್ನಡೆಸಲಿದ್ದು, ತೆಲುಗು ಟೈಟಾನ್ಸ್ ತಂಡದಲ್ಲಿ ರಾಕೇಶ್ ಗೌಡ ಸ್ಥಾನ ಗಳಿಸಿದ್ದಾರೆ. ಹಿರಿಯ ಡಿಫೆಂಡರ್ ಜೀವ ಕುಮಾರ್ ಡೆಲ್ಲಿ ಪರ ಆಡಲಿದ್ದಾರೆ.
ಟೂರ್ನಿಯ ಚುಟುಕು ಪರಿಚಯ:
137 ಪಂದ್ಯ: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 137 ಪಂದ್ಯಗಳು ನಡೆಯಲಿವೆ.
22 ಪಂದ್ಯ: ಪ್ರತಿ ತಂಡ ರೌಂಡ್ ರಾಬಿನ್ ಮಾದರಿಯಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಿವೆ.
03 ಬಾರಿ: ಪಾಟ್ನಾ ಪೈರೇಟ್ಸ್ ಅತಿಹೆಚ್ಚು ಎಂದರೆ 3 ಬಾರಿ ಚಾಂಪಿಯನ್ ಆಗಿದೆ.
03 ಕೋಟಿ ರುಪಾಯಿ: ಚಾಂಪಿಯನ್ ಆಗುವ ತಂಡಕ್ಕೆ 3 ಕೋಟಿ ರುಪಾಯಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್‌ಗೆ 1.8 ಕೋಟಿ ರುಪಾಯಿ ಸಿಗಲಿದೆ.