ಮಂಗಳೂರು: ರಾಜ್ಯದಲ್ಲಿ ಇಂದಿನಿಂದ ಜ.7 ರವರೆಗೆ ಕಠಿಣ ನೈಟ್ ಕರ್ಫ್ಯೂ ಜಾರಿ ಇರಲಿದ್ದು, ಹೊಸ ವರ್ಷಾಚರಣೆಯಲ್ಲಿ ಸರ್ಕಾರದ ಆದೇಶ ಪಾಲಿಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ನಿಯಮಗಳನ್ನು ಯಥಾವತ್ತಾಗಿ ಪಾಲಿಸಲು ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅದೇಶಿಸಿದ್ದಾರೆ.
ಕರ್ಫ್ಯೂ ಅವಧಿಯಲ್ಲಿ ತುರ್ತು ಚಿಕಿತ್ಸೆ ಅಗತ್ಯವಿರುವವರು ಮತ್ತು ವೈದ್ಯಕೀಯ ಸಿಬ್ಬಂದಿ ಓಡಾಡಲು ಅನುಮತಿ ನೀಡಲಾಗಿದ್ದು, ರಾತ್ರಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಕೈಗಾರಿಕಾ ಘಟಕಗಳ ಉದ್ಯೋಗಿಗಳು, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಕಂಪನಿ ಸಿಬ್ಬಂದಿ, ಐಟಿ ಮತ್ತು ಅಗತ್ಯ ಸೇವಾ ಕಂಪನಿ ಉದ್ಯೋಗಿಗಳು, ಗೂಡ್ಸ್ ಹಾಗೂ ಹೋಮ್ ಡಿಲೆವರಿ ವಾಹನಗಳು, ಸಾರ್ವಜನಿಕ ಸಾರಿಗೆ, ರೈಲು, ಮೆಟ್ರೋ ಸೇವೆ ಜೊತೆ ಬಸ್, ರೈಲ್ವೇ ನಿಲ್ದಾಣ ಹಾಗೂ ಏರ್‌ಪೋರ್ಟಿಗೆ ಸಂಚರಿಸುವ ವಾಹನಗಳಿಗೆ ಅನುಮತಿ ನೀಡಲಾಗಿದೆ.
ರಾತ್ರಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸಮಯ ನಿಗದಿ ಮಾಡಲಾಗಿದ್ದು, ಯಕ್ಷಗಾನ, ಉರೂಸ್, ಜಾತ್ರೆ ಹಾಗೂ ಇನ್ನಿತರ ರಾತ್ರಿಯ ಕಾರ್ಯಕ್ರಮ 10 ಗಂಟೆಯ ಒಳಗೆ ಮುಗಿಸುವ ರೀತಿಯಲ್ಲಿ ನಡೆಸಬೇಕು. ನೈಟ್ ಕರ್ಫ್ಯೂ ಆರಂಭವಾಗುವ ಮೊದಲೇ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸುವಂತೆ ಈಗಾಗಲೇ ನಿರ್ದೇಶಿಸಲಾಗಿದ್ದು, ಕಟ್ಟು ನಿಟ್ಟಿನ ಕ್ರಮದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಎನ್‌ಡಿಎಂಎ ಕೆಪಿಡಿಎ ಕಾಯ್ದೆಯಡಿ ಕಠಿಣ ಶಿಕ್ಷೆ ನೀಡಲಾಗುವುದು ಅಂತ ಪೊಲೀಸ್ ಇಲಾಖೆ ತಿಳಿಸಿದೆ. ಇನ್ನೂ ನಗರ ಪೊಲೀಸ್ ಆಯುಕ್ತರು ಇಂದು ಡಿಸಿಪಿಗಳ ಜೊತೆ ನಡೆಸಲಿದ್ದು, ನಿಯಮಗಳನ್ನು ಮೀರಿ ಸುಖಾಸುಮ್ಮನೆ ಓಡಾಟ ಮಾಡೋರನ್ನು ವಶಕ್ಕೆ ಪಡೆಯಲು ಸೂಚನೆ ನೀಡಲಿದ್ದಾರೆ. ಇದೇ ವೇಳೆ ಯಾವೆಲ್ಲ ಬಂದೋಬಸ್ತ್ ಮಾಡಿಕೊಂಡಿದ್ದೀರಿ, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕ್ಬೇಕು. ಜೊತೆಗೆ ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಸೂಚನೆ ನೀಡಲಿದ್ದಾರೆ.