ಬಂಟ್ವಾಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವತಿಯೋರ್ವಳನ್ನು ಸ್ಥಳೀಯ ಯುವಕರ ತಂಡ ರಕ್ಷಿಸಿದ ಘಟನೆ ಜ.5 ರಂದು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದ್ದು, ಯುವಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಎಂಬಲ್ಲಿ ಯುವತಿಯೊಬ್ಬಳು ಮಧ್ಯಾಹ್ನ ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದಿದ್ದು, ಮನೆಯ ಯಜಮಾನ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು, ಮನೆಯಲ್ಲಿ ವಯೋವೃದ್ದ ತಾಯಿಯೊಂದಿಗೆ ಮೂರು ಮಹಿಳೆಯರು ಮಾತ್ರ ಇದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಅಸಹಾಯಕ ಸ್ಥಿತಿಯಲ್ಲಿದ್ದ ಮನೆಯವರು, ಸ್ಥಳೀಯ ಯುವಕ ಅಬ್ದುಲ್ ಖಾದರ್ ರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿದಾಗ, ತಕ್ಷಣವೇ ಸ್ಪಂದಿಸಿದ ಯುವಕರ ತಂಡ ಅವಿರತ ಶ್ರಮ ವಹಿಸಿ ಯುವತಿಯನ್ನು ಮೇಲೆತ್ತಿ ಬದುಕಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ನಿಕಟಪೂರ್ವ ಜಿ. ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ಸುದೀಪ್ ಕುಮಾರ್ ಶೆಟ್ಟಿ, ಸಿದ್ದೀಕ್ ಶರವು, ಹಸೈನಾರ್ ಟಿ ತಾಳಿತ್ತನೂಜಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಮೇಲೆತ್ತುವವರೆಗೂ ಸಲಹೆ ಸೂಚನೆಗಳನ್ನು ನೀಡಿ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಿ, ವೈದ್ಯರನ್ನು ಸಂಪರ್ಕಿಸಿ, ಮನೆಯವರಿಗೆ ಸಾಂತ್ವನ ಹೇಳಿ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದು, ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..