ಮಂಗಳೂರು: ಪ್ರಧಾನಿ ಮೋದಿಯವರ ಪಂಜಾಬ್ ಭೇಟಿ ಸಂದರ್ಭ ಭದ್ರತಾ ವೈಫಲ್ಯದ ಹಿನ್ನೆಲೆ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ದ.ಕ.ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ತಡೆದು ಬಿಜೆಪಿ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ ಘಟನೆ ಜ.6 ರಂದು ನಡೆದಿದೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಕಾಂಗ್ರೆಸ್ ಕಚೇರಿ ಮುಂದೆ ಬಂದಿದ್ದು, ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತ ಲಾರೆನ್ಸ್ ಕಾಂಗ್ರೆಸ್ ಧ್ವಜ ಹಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಾಗಲೇ ಕಾಂಗ್ರೆಸ್ ನ ಇನ್ನಷ್ಟು ಕಾರ್ಯಕರ್ತರು ಆಗಮಿಸಿ ಎರಡೂ ಕಡೆಯ ಕಾರ್ಯಕರ್ತರ ನಡುವೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಿಸಲು ಯತ್ನಿಸಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಹಿಂದೆ ಹೋಗುತ್ತಿದ್ದಂತೆ ಪರಿಸ್ಥಿತಿ ತಿಳಿಯಾಗಿದೆ ಎನ್ನಲಾಗಿದೆ.ಆದರೆ ಅಷ್ಟರಲ್ಲಾಗಲೇ ಅಲ್ಲಿಗೆ ಆಗಮಿಸಿದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ತಾವೂ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುದಾಗಿ ಹೇಳಿ ಕಾರ್ಯಕರ್ತರೊಂದಿಗೆ ಬಿಜೆಪಿ ಕಚೇರಿಯತ್ತ ಪಾದಯಾತ್ರೆಗೆ ಅಣಿಯಾಗಿದ್ದು, ಆದರೆ ಪೊಲೀಸರು ಪ್ರತಿಭಟನೆ ನಡೆಸದಂತೆ ಅವರ ಮನವೊಲಿಸಲು ಯತ್ನಿಸಿದರೂ ಕೇಳದೆ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಬಿಜೆಪಿ ಕಚೇರಿಯತ್ತ ಹೋಗಿದ್ದು, ಈ ಸಂದರ್ಭ ಪೊಲೀಸರು ಅವರನ್ನು ಅರ್ಧದಲ್ಲಿ ತಡೆದ್ದಾರೆ. ಆದ್ದರಿಂದ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿದ್ದಾರೆ. ಆದರೂ ಪ್ರತಿಭಟನೆಯನ್ನು ಕೈಬಿಡದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಮೂಲಕ ಕಾಂಗ್ರೆಸ್ ಬಿಜೆಪಿ ಪ್ರತಿಭಟನೆಯ ಸಂಘರ್ಷಕ್ಕೆ ತೆರೆ ಬಿದ್ದಿದೆ ಎನ್ನಲಾಗಿದೆ.