ಪುತ್ತೂರು : ತುಳುನಾಡ ವೀರ ಪುರುಷರಾಗಿರುವ ಕೋಟಿ ಚೆನ್ನಯ್ಯಯರ ಪುಣ್ಯಕ್ಷೇತ್ರ ಗೆಜ್ಜೆಗಿರಿಯ ವಿವಾದಕ್ಕೆ ಸಂಬಂಧಿಸಿದಂತೆ ಪುತ್ತೂರು ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.
ಗೆಜ್ಜೆಗಿರಿಯಲ್ಲಿನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕರಾಗಿರುವ ಶ್ರೀಧರ ಪೂಜಾರಿ ಅವರು ಪುತ್ತೂರು ನ್ಯಾಯಾಲಯದಲ್ಲಿ ಜನವರಿ 16ರಂದು ದಾವೆ ಹೂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂದೂವರೆ ತಿಂಗಳ ಕಾಲ ಗೆಜ್ಜೆಗಿರಿ ಆಡಳಿತ ಸಮಿತಿ ಹಾಗೂ ಶ್ರೀಧರ ಪೂಜಾರಿ ಅವರ ಕಡೆಯ ನ್ಯಾಯವಾದಿಗಳು ಬಿರುಸಿನಿಂದ ವಾದ ವಿವಾದ ನಡೆಸಿದ್ದರು. ಗೆಜ್ಜೆಗಿರಿ ವಿವಾದ ತೀವ್ರ ಕುತೂಹಲವನ್ನು ಮೂಡಿಸಿದ್ದು, ಭಕ್ತರು ಆತಂಕಕ್ಕೆ ಒಳಗಾಗಿದ್ದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಇಂದು ಗೆಜ್ಜೆಗಿರಿಯ ಜಾಗ ಹಾಗೂ ಆಡಳಿತ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಶ್ರೀಧರ ಪೂಜಾರಿ ಅವರು ಗೆಜ್ಜೆಗಿರಿ ಆಡಳಿತ ಮಂಡಳಿಯ ಆಡಳಿತಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಆಡಳಿತ ಮಂಡಳಿಯ ಆಡಳಿತಕ್ಕೆ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಜಾರಿಯಲ್ಲಿರುವ ಆಡಳಿತ ಮಂಡಳಿಯ ಆಡಳಿತದಲ್ಲಿಯೇ ನಿತ್ಯದ ಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಲು ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ.
ಇನ್ನು ಗೆಜ್ಜೆಗಿರಿಯಲ್ಲಿನ ಜಾಗವನ್ನು ಹೊರತು ಪಡಿಸಿ ಶ್ರೀಧರ ಪೂಜಾರಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಜಾಗದಲ್ಲಿ ನ್ಯಾಯಾಲಯದ ಹುಕುಂ ಪ್ರಕಾರ ತಾತ್ಕಾಲಿಕವಾಗಿ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಇದೀಗ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದ್ದು, ಶೀಘ್ರದಲ್ಲಿಯೇ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಮಧ್ಯಂತರ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದೆ. ಭಕ್ತರ ಭಾವನೆ ಮತ್ತು ಕ್ಷೇತ್ರದ ಪಾವಿತ್ರ್ಯತೆಗೆ ಪೂರಕವಾಗಿ ಈ ತೀರ್ಪು ಬಂದಿದೆ ಎಂದು ವಿಶ್ವ ಬಿಲ್ಲವರ ಪ್ರಾತಿನಿಧಿಕ ಸಮಿತಿಯಾದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ತಿಳಿಸಿದೆ.