ಮೈಸೂರು: ಶಾಲೆಯಲ್ಲೇ ವಿದ್ಯಾರ್ಥಿನಿಗೆ ಮುಖ್ಯಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಶಾಲೆವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ದೃಶ್ಯ ಅದೇ ಶಾಲೆಯ ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡ್ತಿದ್ದು, ವಿಡಿಯೋ ಬಗ್ಗೆ ತಿಳಿಯುತ್ತಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯ ಪೋಷಕರು ಹೆಚ್.ಡಿ ಕೋಟೆ ಬಿಇಓ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಇಓ ಅವರು, ಶಾಲೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಅಧಿಕಾರಿ ಶಾಲೆಗೆ ಭೇಟಿ ನೀಡಿಲ್ಲ ಎನ್ನಲಾಗಿದ್ದು, ಕೇವಲ ದೂರವಾಣಿ ಮೂಲಕ ಘಟನೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಶಿಕ್ಷಕ ಕೂಡ ಶಾಲೆಗೆ ಹಾಜರಾಗಲು ಹಿಂಜರಿದಿದ್ದು, ಶಾಲೆಗೆ ಬಂದರೆ ಗ್ರಾಮಸ್ಥರ ಆಕ್ರೋಶಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಆತಂಕ ಹೊಂದಿದ್ದಾರೆ ಎನ್ನಲಾಗಿದೆ.