‘ಹೆಣ್ಣು ಸಮಾಜದ ಕಣ್ಣು’ ಎಂಬ ಮಾತು ಸತ್ಯವಾದರೂ ಸಹ ಅದನ್ನು ಎಲ್ಲರೂ ಸುಲಭವಾಗಿ ಒಪ್ಪಿಕೊಳ್ಳಲು ತಯಾರಿಲ್ಲ ಎಂಬುದಕ್ಕೆ ಈ ಪುರುಷ ಪ್ರಧಾನ ಸಮಾಜವೇ ಸಾಕ್ಷಿ. ಹಿಂದೆ ವೇದಗಳ ಕಾಲದಲ್ಲೂ ಮೈತ್ರೇಯಿ ಮತ್ತು ಗಾರ್ಗಿಯಂತಹ ಮಹಿಳಾ ಪುರೋಹಿತರಿದ್ದರು ಹಾಗೂ ಮಹಿಳೆಯರಿಗೆ ವಿಶೇಷ ಗೌರವ – ಸ್ಥಾನಮಾನವಿತ್ತು. ತದನಂತರ ವೇದೋತ್ತರ ಭಾರತದ ಮಹಿಳೆಯರ ಸಾಮಾಜಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿತು. ಆದ್ದರಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ದೊರಕಬೇಕಾಗಿದೆ.
ಸ್ತ್ರೀ ಎಂದರೆ “ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ರೂಪೇಚ ಲಕ್ಷ್ಮಿ, ಕ್ಷಮಯಾ ಧರಿತ್ರಿ, ಬೋಜ್ಯೇಶು ಮಾತಾ, ಶಯನೇಶು ರಂಭಾ” ಎಂಬ ಮಾತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ನುಡಿಗಳಿಗೆ ತಡೆಗೋಡೆ ಎಂಬಂತೆ ಅತ್ಯಾಚಾರ – ದೌರ್ಜನ್ಯಗಳು ನಡೆಯುತ್ತಿದೆ. ಹೆಣ್ಣು ಪ್ರೀತಿ ಒಪ್ಪಲಿಲ್ಲ ಎಂದು ಅವಳ ಮೇಲೆ ದಾಳಿ, ಪುಟ್ಟ ಮಗು ಎಂದೂ ಅರಿಯದೆ ದೌರ್ಜನ್ಯ ಹೀಗೆ ಹಲವಾರು ಸಮಾಜ ಮುಖಗಳು ಕಂಡುಬರುತ್ತಿವೆ. ಇವೆಲ್ಲಾ ನಮ್ಮ ಸಂಸ್ಕೃತಿಯೇ-ಸಭ್ಯತೆಯೇ?? ಯಾಕಿಷ್ಟು ಘೋರವಾದ ವಾತಾವರಣ ಸೃಷ್ಟಿಯಾಗಿದೆ? ಎಂದು ತಿಳಿಯುತ್ತಿಲ್ಲ.
ಅಂದೊಂದು ಹೆಣ್ಣು ನರ ರಕ್ಕಸರ ಅಟ್ಟಹಾಸಕ್ಕೆ ಬಲಿಯಾದಳು.ಅದಾದ ನಂತರ ಕಳೆದುಕೊಂಡ ಹೆಣ್ಮಕ್ಕಳ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಗಲಿಕ್ಕಿಲ್ಲ.ಈಗ ಮತ್ತೆ ಪ್ರಿಯಾಂಕಳಿಂದ ಹಿಡಿದು,ಈಕೆಯ ವಿಚಾರ ಹೊತ್ತಿ ಉರಿಯಬೇಕಾದರೆ ಮತ್ತೊಂದು ಮಗುವಿನ ಮೇಲೆ ಅತ್ಯಾಚಾರ…ಹೆಣ್ಣು ಆಟದ ಬೊಂಬೆಯೋ ಅಥವಾ ಭೋಗದ ವಸ್ತುವೋ?,,ಛಿ! ಸಮಾಜದಲ್ಲಿ ಹೆಣ್ಣಿಗೆ ಬೆಲೆ ಇಲ್ಲವೇ ಅಂತ ಇತ್ತೀಚೆಗೆ ಯಾರನ್ನೋ ಪ್ರಶ್ನಿಸಿದಾಗ ದೊರೆತ ಉತ್ತರ “ಉಡುಗೆ ಸರಿ ಇರಬೇಕು,ಆಗ ಅತ್ಯಾಚಾರ ಆಗುವುದಿಲ್ಲ” ಅಂತ..ಇದನ್ನೇ ಒಪ್ಪಿಕೊಂಡೆವು ಅಂತಿಟ್ಟುಕೊಳ್ಳೋಣ..ಆದರೆ ಅಂದು ಏನೂ ಅರಿಯದ ಪುಟ್ಟ ಮಗು ಮೇಲೆ ಕಾಮುಕನ ಅಟ್ಟಹಾಸ ಮೆರೆಯಿತು,ಮತ್ತೊಂದೆಡೆ ಸೀರೆ ಉಟ್ಟ ಹಣ್ಣು ಹಣ್ಣು ಜೀವದ ಮೇಲೆ ಮಾರಣಾಂತಿಕ ಅತ್ಯಾಚಾರ,, ಹಾಗಾದರೆ ಇದಕ್ಕೆ ಏನು ಹೇಳೋಣ? ಇಲ್ಲೂ ಬಟ್ಟೆ-ಬರೆ ವಿಚಾರ ಅಂತ ಹೇಳ್ಬೋದಾ!?..ಇಂದು ಅತ್ಯಾಚಾರ ವಿಚಾರಕ್ಕೆ ಲಂಗು ಲಗಾಮಿಲ್ಲದಂತಾಗಿದೆ.ನೋಡುಗರ ದ್ರಷ್ಟಿ ಸರಿಯಾದರೆ ಎಲ್ಲವೂ ಸರಿಯಾಗುತ್ತೆ….
ನೀವೊಮ್ಮೆ ನಿಮ್ಮ ಮನಸಿನೊಡನೆ ಮಾತಾಡಿ ನೋಡಿ. ನಮ್ಮನ್ನು ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿ ಹೆಣ್ಣು, ನಮ್ಮ ಪ್ರೀತಿಯ ಅಕ್ಕ-ತಂಗಿ ಹೆಣ್ಣು, ಭಾವನೆಗಳಿಗೆ ಭಾವನೆಗಳ ಬೆಸೆದು ಸಪ್ತಪದಿ ತುಳಿದು ಜೊತೆಯಾಗಿರುವ ಮಡದಿ ಹೆಣ್ಣು, ರಕ್ತವನ್ನು ಹಂಚಿಕೊಂಡು ಹುಟ್ಟಿ, ಸತ್ತಾಗ ಬಾಯಿಗೆ ಗಂಗಾಜಲ ನೀಡುವ ಮಗಳು ಹೆಣ್ಣು, ಆದರೂ ದೌರ್ಜನ್ಯ – ಅತ್ಯಾಚಾರಗಳಂತಹ ಉಗ್ರಶಿಕ್ಷೆ ಕೂಡಾ ಹೆಣ್ಣಿಗೆ. ಎಲ್ಲಾ ವಿಚಾರಗಳಲ್ಲೂ, ಕಾರ್ಯಗಳಲ್ಲೂ ಮಹಿಳೆಯ ಸಬಲೀಕರಣ ಆಗುತ್ತಿದ್ದರೆ ಈ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ??!!
ಹೌದು ಸ್ನೇಹಿತರೇ, ಇದು ನಮ್ಮ ಸಮಾಜದ ಈಗಿನ ಪರಿಸ್ಥಿತಿ. ಹಾಗಂತ ಮಹಿಳೆಯರಿಗೆ ಏನೂ ಸೌಲಭ್ಯ ದೊರೆತಿಲ್ಲ ಎಂದು ನಾನು ಖಂಡಿತಾ ಹೇಳಲಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಅಪಾರ. ಕಲಾರಂಗದಲ್ಲಿ, ರಾಜಕೀಯ ವಿಚಾರದಲ್ಲಿ ಮಹಿಳೆಗೆ ಖಂಡಿತವಾಗಿಯೂ ಮೀಸಲಾತಿ ಸೌಲಭ್ಯ ದೊರೆತಿದೆ. ವನಿತೆಯರು ಸ್ವಂತ ಉದ್ಯಮ ಕೈಗೊಳ್ಳಲು ಅವಕಾಶವೂ ಇದೆ. ಆದರೆ ಮಹಿಳಾ ಸಬಲೀಕರಣದ ಹಾದಿಯಲ್ಲಿ ಕೆಲವೊಂದು ಅನಾವಶ್ಯಕ ಸಂಪ್ರದಾಯ ಆಚರಣೆಗಳು, ಅತ್ಯಾಚಾರದಂತಹ ಅಮಾನುಷ ಘೋರ ಕೃತ್ಯಗಳು, ಇವತ್ತಿನ ದಿನದಲ್ಲೂ ಕೆಲವು ಹಳ್ಳಿಗಳಲ್ಲಿ ಮಹಿಳೆ ಯಾರ ಬಳಿಯಾದರೂ ಅಥವಾ ಸುತ್ತಾಡಲೆಂದು ಹೋದರೂ, ಗೆಳೆಯ ಎಂಬ ಭಾವನೆಯಿಂದ ಮಾತನಾಡಿದರೂ ಅದನ್ನು ಕಂಡ ಈ ಸಮಾಜ ಆಕೆಯ ಕುರಿತಾಗಿ ಕೆಟ್ಟ ಹೇಳಿಕೆಗಳನ್ನು ನೀಡುವುದು ಈ ಮಹಿಳಾ ಮನಶ್ಶಕ್ತಿಗೆ ಸಮುದ್ರಕ್ಕೆ ಅಡ್ಡವಾಗಿ ನಿಂತಿರುವ ತಿಮಿಂಗಿಲದಂತೆ ತಡೆಗೋಡೆಯಾಗುತ್ತಿದೆ.
ಮಹಿಳೆಯರ ಸಾಧನೆಯ ನಡುವೆ ಇದೊಂದು ಕಪ್ಪುಚುಕ್ಕೆಯಾಗುತ್ತಿದೆ. ನಮ್ಮ ದೇಶದ ಮಹಿಳೆಯರು ಮಾಡಿದ ಸಾಧನೆಗಳನ್ನು ಕೇಳಿದ ಎಂತಹ ಪುರುಷನಾದರೂ ಹೆಮ್ಮೆ ಪಡಬೇಕೇ ಹೊರತು ಅವಳನ್ನು ಹೀಯಾಳಿಸುವಂತಿಲ್ಲ.ಏಕೆಂದರೆ ಶಿಕ್ಷಣಕ್ಕೆ ಮುನ್ನುಡಿಯ ಭಾಷ್ಯ ಬರೆದ ಪಾಕಿಸ್ತಾನದ ಬಾಲೆ ‘ ಮಲಾಲ’ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಏರಿದ ರೀತಿ ಅಮೋಘ.ಈಕೆ ತಾಲಿಬಾನಿಗಳ ದೌರ್ಜನ್ಯವನ್ನು ನಿರಂತರವಾಗಿ ಕಂಡವಳು. ಆದರೆ ಅವರೆಲ್ಲರನ್ನು ಎದುರಿಸಿ ಈಕೆ ಹೋರಾಡಲಿಲ್ಲವೇ? ಎರಡೂ ಕೈಗಳಿಲ್ಲದೇ ವಿಮಾನ ಹಾರಿಸಿದ ಅಮೇರಿಕಾ ಬೆಡಗಿ ಜೆಸ್ಸಿಕಾ ಕಾಕ್ಸ್ ಹೆಣ್ಣು ತಾನೇ? ಅದಿರಲಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ಲಕ್ಷ್ಮೀಬಾಯಿ ಇವರು ಸ್ತ್ರೀ ಕುಲ ಸ್ತುಭರಲ್ಲವೇ? ನಾವು ಎಷ್ಟೇ ಹಿಂಸೆಯನ್ನು ಕೊಟ್ಟರೂ ಅದನ್ನು ಸಹಿಸುತ್ತಾ ನಮ್ಮನ್ನು ಹೊತ್ತು ನಿಂತಿರುವ ಭೂಮಿ ತಾಯಿ ಮಹಿಳಾ ಸ್ವರೂಪವಲ್ಲವೇ? ನಮ್ಮಿಂದ ಯಾರೂ ಕದಿಯಲಾರದ ಆಸ್ತಿಯೇ ವಿದ್ಯೆ. ಈ ವಿದ್ಯಾದೇವತೆ ಸರಸ್ವತಿ, ನಾವು ಹೊಂದಿರುವ ಅಪಾರ ಆಸ್ತಿ – ಐಶ್ವರ್ಯದ ಅಧಿದೇವತೆ ಲಕ್ಷ್ಮಿ ಸ್ತ್ರೀ ಕುಲದ ಪುಷ್ಪವಲ್ಲವೇ? ಇಷ್ಟೆಲ್ಲಾ ಅಂಶಗಳು ಗೊತ್ತಿರುವಾಗ ಮಹಿಳೆಯರನ್ನು ಏತಕ್ಕಾಗಿ ನಿಕ್ೃಷ್ಟವಾಗಿ ಕಾಣುತ್ತಾರೆ ಎಂಬುದೇ ಖೇದಕರ.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಮೀನಾ ಯೋಜನೆ ಜಾರಿಗೆ ತರಲಾಯ್ತು. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ತರಲಾಯ್ತು. 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ತರಲಾಯ್ತು. ಪುರುಷರಷ್ಟೇ ಸಮಾನ ಸ್ಥಾನಮಾನ ಕಲ್ಪಿಸಲು ಯೋಜನೆ ರೂಪಿಸಲಾಯಿತು. ಆದರೆ ಈ ಎಲ್ಲಾ ಕಾಯ್ದೆಗಳು ಸ್ತ್ರೀಯರ ಸಾಧನೆ, ಕಾರ್ಯಗಳಿಗೆ ಸೀಮಿತವಾಯಿತೇ ವಿನಃ ಮಹಿಳೆ ನಿರ್ಭಯವಾಗಿ ಓಡಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ.
“ಪೆಣ್ಣು ಪೆಣ್ಣೆಂದೇಕೆ ಪೆರ್ಚುವರು ಪೆಣ್ ಜನರು, ಪೆಣ್ಣಲ್ಲವೇ ನಮ್ಮ ಪೆತ್ತ ತಾಯಿ” ಎಂದು ಯಾಕೆ ಯಾರಿಗೂ ತಿಳಿಯುತ್ತಿಲ್ಲ ಎಂಬುದೇ ನನ್ನನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ. ಹಿತ್ತಾಳೆಯಂತಹ ಮನುಷ್ಯನನ್ನು ಬಂಗಾರವಾಗಿಸುವುದರಲ್ಲಿ ಹೆಣ್ಣಿನ ಪಾತ್ರ ಅಪಾರ. ಮಹಿಳಾ ಸಬಲೀಕರಣದ ಬಗ್ಗೆ ಹತ್ತಾರು ವರ್ಷಗಳಿಂದ ಸದ್ದಿಲ್ಲದ ಪ್ರಯತ್ನಗಳು ಗ್ರಾಮಮಟ್ಟದಲ್ಲೂ ನಡೆಯುತ್ತಿವೆ. ಆದರೆ ನಿರೀಕ್ಷಿತ ಪ್ರಗತಿ ಮಾತ್ರ ಮರೀಚಿಕೆ. ಸ್ತ್ರೀ ಪುರುಷ ಸಮಾನತೆಯ ಬಗ್ಗೆ ಪಟ್ಟಣದಲ್ಲಿರುವಷ್ಟು ಜಾಗೃತಿ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿಲ್ಲ. ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಜಾಗೃತಿ ಮೂಡಿಸುವವರು ಯಾರೂ ಇಲ್ಲ.
ಒಂದು ವೇಳೆ ಪ್ರಸ್ತುತ ದಿನಗಳಲ್ಲಿ ಮಹಿಳಾ ಸಬಲೀಕರಣವಾದರೆ ಅಂದರೆ ಮಹಿಳೆಗೆ ಯಾವುದೇ ರೀತಿಯ ಭಯಗಳಿಲ್ಲದೆ ಸಮಾಜದಲ್ಲಿ ನಿರ್ಭಯವಾಗಿ ಜೀವನ ನಡೆಸಲು ಸೂಕ್ತ ಅವಕಾಶ ದೊರೆತರೆ ನಮ್ಮ ಈ ಸಮಾಜಕ್ಕೆ ತಟ್ಟಿದ ಕಳಂಕ ದೂರವಾದಂತಾಗುತ್ತದೆ. ಸಮಾಜದ ಶೋಭೆ ಹೆಚ್ಚುತ್ತದೆ. ನಮ್ಮ ಈ ಸಮಾಜದಲ್ಲಿ ಹೊಸತನ ಮೂಡಿಬರುತ್ತದೆ. ‘ಯತ್ರ ನಾರಿಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಅಂದರೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಸ್ವಾಮಿ ವಿವೇಕಾನಂದರು, ರಾಜಾರಾಂ ಮೋಹನ್ ರಾಯರಂತ ಸಮಾಜ ಸುಧಾರಕರು ಕಂಡ ಸಬಲ ಮಹಿಳಾ ಸಮಾಜ ನಿರ್ಮಾಣ ಆಗಲಿ.