ತಿರುವನಂತಪುರಂ: ಕೇರಳದ ಕೋಜಿಕೋಡ್‌ನಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ಬಾಲಿಕಾ ಗೃಹದಿಂದ ಆರು ಹುಡುಗಿಯರು ನಾಪತ್ತೆಯಾಗಿದ್ದು, ಅವರಲ್ಲಿ ಒಬ್ಬಳು ಹುಡುಗಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
ಬುಧವಾರ ಸಂಜೆ ಹುಡುಗಿಯರು ನಾಪತ್ತೆಯಾಗಿದ್ದು, ಹುಡುಗಿಯರನ್ನು ಪತ್ತೆ ಹಚ್ಚಲು ಪೊಲೀಸರ ತಂಡ ಬೆಂಗಳೂರಿಗೆ ಬರಲಿದೆ. ಸದ್ಯ ಬೆಂಗಳೂರಿನ ಮಡಿವಾಳ ಹೋಟೆಲ್‍ನಲ್ಲಿ ಓರ್ವ ಹುಡುಗಿ ಪತ್ತೆಯಾಗಿದ್ದಾಳೆ ಎಂದು ಕೇರಳದ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಸಹೋದರಿಯರು ಸೇರಿದಂತೆ ನಾಲ್ವರು ಹುಡುಗಿಯರ ನಾಪತ್ತೆ ಬಗ್ಗೆ ಕೇರ್ ಹೋಮ್ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪೊಲೀಸರು ಪ್ರಕರಣ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ಇತರ ಐವರು ಹುಡುಗಿಯರ ಪತ್ತೆಗಾಗಿ ವಿಶೇಷ ಪೊಲೀಸರ ತಂಡ ಬೆಂಗಳೂರಿಗೆ ತೆರಳುತ್ತಿದ್ದಾರೆ ಎಂದು ಚೆವಾಯೂರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕರಣ ದಾಖಲಿಸಿದೆ.
ಹುಡುಗಿಯರು ಹೊರಗಿನವರ ಬೆಂಬಲದಿಂದ ಬುಧವಾರ ರಾತ್ರಿ ತಪ್ಪಿಸಿಕೊಂಡು ಬೆಂಗಳೂರಿಗೆ ರೈಲು ಅಥವಾ ಬಸ್ ಮೂಲಕ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನೂ ಸಿಸಿಟಿವಿ ದೃಶ್ಯವಳಿಗಳನ್ನು ಗಮನಿಸಿದಾಗ ಏಣಿ ಬಳಸಿ ಹುಡುಗಿಯರು ಪರಾರಿಯಾಗಿರುವುದು ಕಂಡು ಬಂದಿದೆ.