ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಓರ್ವ ಯಶಸ್ವಿ ಕ್ರೀಡಾಪಟುವಾಗಿ ಪ್ರತಿಷ್ಠಿತ ಐಕಳ ಮನೆತನದ ಪುತ್ರನಾಗಿ ಬರಿಗೈಯ್ಯಲ್ಲಿ ಬದುಕು ಕಟ್ಟಿಕೊಳ್ಳಲು ಮುಂಬೈಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿದವರು ಪ್ರತಿಷ್ಠಿತ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಪ್ರಮುಖರು.
ಮುಂಬೈಯಲ್ಲಿ ಬಂಟರ ಸಂಘವನ್ನು ಭದ್ರಪಡಿಸಿ ಜಾಗತಿಕ ರಾಷ್ಟ್ರಗಳಲ್ಲಿ ಬಂಟ ಸಮಾಜವನ್ನು ಒಗ್ಗೂಡಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಮನೋಚಿತ್ತ ಐಕಳ ಹರೀಶ್ ಶೆಟ್ಟಿಯವರದು.ಮುಂಬೈಯಲ್ಲಿ ಸಂಕಷ್ಟದಲ್ಲಿದ್ದ ಕರಾವಳಿಯ ಯುವಕರಿಗೆ ನೆರವಾಗುವ ಮೂಲಕ ಮತ್ತು ಜಾಗತಿಕ ಬಂಟರ ಒಕ್ಕೂಟದ ಮೂಲಕ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ಅನಾರೋಗ್ಯ ಪೀಡಿತರಿಗೆ ನೆರವು,ಬಡಯುವತಿಯರ ವಿವಾಹ ಸಮಾರಂಭಗಳಿಗೆ ನೆರವು, ನೂರಾರು ಬಡಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟ ಹೆಗ್ಗಳಿಕೆ ಐಕಳ ಹರೀಶ್ ಶೆಟ್ಟಿಯವರದು.

ಮುಂಬೈಯಲ್ಲಿ ಹತ್ತಾರು ಹೋಟೆಲ್ ಉದ್ಯಮ ಹೊಂದಿರುವ ಇವರು ಕರಾವಳಿಯ ಹಲವಾರು ಪ್ರತಿಭೆಗಳಿಗೆ ಮುಂಬೈಯಲ್ಲಿ ಬೆಳಕಾದವರು.ಜೊತೆಗೆ ಕರಾವಳಿಯ ರಂಗಭೂಮಿ, ಸಾಂಸ್ಕೃತಿಕ ಕಲೆ,ಕ್ರೀಡೆಗಳಿಗೆ ಮುಂಬೈನಲ್ಲಿ ಪ್ರಾಯೋಜಕತ್ವ ನೀಡಿದ್ದಲ್ಲದೆ,ಪ್ರೋತ್ಸಾಹವನ್ನೂ ನೀಡುತ್ತಾ ಬಂದಿದ್ದಾರೆ.ಅಶಕ್ತರು,ಬಡಜನರು,ನಿರ್ಗತಿಕರು ಕೇವಲ ಮಹಾನಗರಗಳಲ್ಲದೆ ಕರಾವಳಿಯ ವಿವಿಧ ತಾಲೂಕುಗಳಲ್ಲಿ ಗ್ರಾಮೀಣ ಭಾಗಗಳಲ್ಲೂ ಇದ್ದು ಇಂತವರ ಕಡೆಗೂ ತನ್ನ ನೆರವು, ಸಹಾಯ, ಯೋಜನೆಗಳು ತಲುಪಬೇಕೆಂಬ ಇರಾದೆಯನ್ನು ಶೆಟ್ಟರು ಹೊಂದಿದ್ದು, ಇದಕ್ಕಾಗಿ ಹಲವಾರು ಯೋಜನೆಗಳನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆಂದರೂ ತಪ್ಪಾಗಲಾರದು.

ಕಟೀಲು ಬ್ರಹ್ಮಕಲಶೋತ್ಸವ ಸೇರಿದಂತೆ ಕರಾವಳಿ ಭಾಗದ ಹತ್ತಾರು ದೈವ ದೇವಸ್ಥಾನಗಳಿಗೆ ಮುಂಬೈ ಭಾಗದಿಂದ ನೆರವು ಒದಗಿಸಿಕೊಟ್ಟ ಐಕಳ ಹರೀಶ್ ಶೆಟ್ಟಿಯವರು ಓರ್ವ ಧಾರ್ಮಿಕ ಮುಂದಾಳು ಕೂಡ ಹೌದು. ಸಮಾಜದ ಏಳಿಗೆಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೇಶ ವಿದೇಶಗಳಿಗೆ ಸುತ್ತಿ ದಾನಿಗಳ ನೆರವು ಕೋರಿ ಜಾಗತಿಕ ಬಂಟರ ಸಂಘದ ನಿಧಿ ಸಂಗ್ರಹಿಸುವಲ್ಲೂ ಐಕಳ ಹರೀಶ್ ಶೆಟ್ಟಿಯವರ ಪಾತ್ರ ಮಹತ್ವದ್ದು.ಓರ್ವ ಯಶಸ್ವಿ ಸಂಘಟಕನಾಗಿ ಕಟೀಲಿನಲ್ಲಿ ವಿಶ್ವ ಬಂಟರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದವರು ಕೂಡ. ಇವರ ಸಾಮಾಜಿಕ ರಂಗದ ಸೇವೆಗೆ ಅರ್ಹವಾಗಿಯೇ ಮುಂಬೈಯಲ್ಲಿ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾಜದಲ್ಲಿ ಬಿಳಿ ಬಟ್ಟೆ ಧರಿಸಿ ತಾನೊಬ್ಬ ಇಂತಹ ಸಮುದಾಯದ ನಾಯಕನೆಂದು ಹತ್ತು ಜನರಿಗೆ ತೋರಿಸಿಕೊಳ್ಳಲು ಪದವಿಯನ್ನು ಬಳಸುವ ಕೆಲ ನಾಯಕರ ಮಧ್ಯೆ ತಮ್ಮ ಅಂತರದ ವ್ಯಕ್ತಿಗಳೊಡನೆ ಮಾತ್ರ ಸಖ್ಯವಿರುವ ಸಮಾಜದ ನಾಯಕರ ನಡುವೆ ಐಕಳ ಹರೀಶ್ ಶೆಟ್ಟಿಯವರು ಸೇವೆ, ದಾನ,ಧರ್ಮಗಳ ಮೂಲಕ ವಿಭಿನ್ನವಾಗಿ ಕಾಣಸಿಗುತ್ತಾರೆ.ತಾನು ಜಾಗತಿಕ ಬಂಟರ ಸಂಘದ ಅಧ್ಯಕ್ಷನಾಗಿ ಕೇವಲ ತನ್ನ ಸಮುದಾಯವನ್ನು ಮಾತ್ರ ಪ್ರೀತಿಸದೆ ಎಲ್ಲಾ ಜಾತಿ ಸಮಾಜ ಬಾಂಧವರನ್ನು ಸಮಾನವಾಗಿ ಪ್ರೀತಿಸುವ ಐಕಳ ಹರೀಶ್ ಶೆಟ್ಟಿಯವರ ಸೇವಾ ಗುಣದಿಂದ ಇಂದು ನೂರಾರು ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು, ವಿದ್ಯುತ್ ಬೆಳಕಿಲ್ಲದೆ ಚಿಮಿಣಿ ದೀಪದಲ್ಲಿ ರಾತ್ರಿ ಕಳೆಯುತ್ತಿದ್ದ ಕುಟುಂಬಗಳ ಪಾಲಿಗೆ ಐಕಳ ಹರೀಶ್ ಶೆಟ್ಟಿಯವರು ಬೆಳಕಾಗಿರುವುದು ಸುಳ್ಳಲ್ಲ.ನಿವೇಶನವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ನಿವೇಶನ ಒದಗಿಸಿ ಮನೆ ಕಟ್ಟಿಕೊಡುವ ಕಾರ್ಯವನ್ನು ಕೂಡ ಜಾಗತಿಕ ಬಂಟರ ಸಂಘದ ಒಕ್ಕೂಟವು ನಡೆಸಿದೆ.
ತನ್ನ ಬಾಲ್ಯ ಜೀವನದಿಂದಲೇ ನಾಯಕತ್ವ ಗುಣ ಮೂಡಿಸಿಕೊಂಡ ಐಕಳ ಹರೀಶ್ ಶೆಟ್ಟಿಯವರನ್ನು ರಾಜಕೀಯ ಕ್ಷೇತ್ರಕ್ಕೂ ವಿವಿಧ ರಾಜಕೀಯ ಪಕ್ಷಗಳು ಆಹ್ವಾನಿಸಿವೆ.ಜೀವನದಲ್ಲಿ ಸಿಹಿ ಮತ್ತು ಕಹಿ ಎರಡನ್ನೂ ಕಂಡ ಐಕಳ ಹರೀಶ್ ಶೆಟ್ಟಿಯವರು ಯುವಸಮುದಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ. ನಮ್ಮ ಹಿರಿಯರಿಂದ ದೊರೆತ ಸಂಸ್ಕಾರ, ಸಂಸ್ಕೃತಿ ಆಚಾರ, ವಿಚಾರಗಳ ಋಣ ನಮ್ಮ ಮೇಲಿದ್ದು ಇದನ್ನು ಸಮಾಜಕ್ಕೆ ಕೊಡುವ ಕೆಲಸ ನಮ್ಮಿಂದಾಗಬೇಕೆನ್ನುತ್ತಾರೆ ಐಕಳ ಹರೀಶ್ ಶೆಟ್ಟಿಯವರು.
✍🏻ಎ.ಕೆ ಶೆಟ್ಟಿ ಉಪ್ಪಿನಂಗಡಿ