ಪುತ್ತೂರು: ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ , ಹಿರಿಯ ಪತ್ರಕರ್ತ, ಹೊಸದಿಂಗತ ಪತ್ರಿಕೆಯ ವರದಿಗಾರ ಬಿ.ಟಿ. ರಂಜನ್ ಎಂದೇ ಖ್ಯಾತರಾಗಿದ್ದ ಉಪ್ಪಿನಂಗಡಿ ರಥಬೀದಿ ನಿವಾಸಿ ಬಂಟ್ವಾಳ ತೋನ್ಸೆ ಶೆಣೈ (60) ಫೆ. 5 ರಂದು ಮುಂಜಾನೆ ನಿಧನರಾದರು.
ಕಳೆದ ಎರಡು – ಮೂರು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ರಂಜನ್ ರವರಿಗೆ ನಿನ್ನೆ ( ಫೆ. 4) ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ವಿಪರೀತ ಏರುಪೇರು ಕಾಣಿಸಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಮಧ್ಯಾಹ್ನದ ವೇಳೆ ಆರೋಗ್ಯ ಇನ್ನಷ್ಟು ವಿಷಮಿಸಿದ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂರು ದಶಕಕ್ಕೂ ಅಧಿಕ ಕಾಲದಿಂದ ಪತ್ರಿಕಾ ರಂಗದಲ್ಲಿ ವ್ಯವಸಾಯ ಮಾಡುತ್ತಿದ್ದ ರಂಜನ್ ರವರು ಪತ್ರಿಕಾ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪುತ್ತೂರಿನ ಅಗ್ರಗಣ್ಯ ಪತ್ರಕರ್ತ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತು ಹಲವು ಪುರಸ್ಕಾರ, ಪ್ರಶಸ್ತಿ ಸನ್ಮಾನಗಳು ಸಂದಿವೆ.
ಬಿ.ಟಿ. ರಂಜನ್ ರವರು ಕರಾವಳಿಯ ಪತ್ರಿಕಾ ಲೋಕದ ಪ್ರಖ್ಯಾತ ಹೆಸರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರ ಒಡೆತನದ ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸುವ ಮೂಲಕ ಒಡ್ಡರ್ಸೆ ಗರಡಿಯಲ್ಲಿ ಪಳಗಿ, ಬಳಿಕ ವೃತ್ತಿ ಜೀವನವನ್ನು ಮಂಗಳೂರು ಮಿತ್ರ, ಹೊಸ ದಿಂಗತ ಪತ್ರಿಕೆಯಲ್ಲಿ ಒಂದಷ್ಟು ವರ್ಷ ಮುಂದುವರಿಸಿದವರು.
26 ವರ್ಷಗಳ ಸುದೀರ್ಘ ಕಾಲ ಉದಯವಾಣಿ ಪತ್ರಿಕೆಯಲ್ಲಿ ವಿವಿಧ ಸ್ಥರದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಹೆಗ್ಗಳಿಕೆ ಅವರದು. 2017ರಲ್ಲಿ ಉದಯವಾಣಿಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಹೊಸದಿಂಗತ ಪತ್ರಿಕೆಯಲ್ಲಿ ವರದಿಗಾರರಾಗಿ ದುಡಿಯುತ್ತಿದ್ದರು.