ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವವು ಫೆ.16 ರಿಂದ ಫೆ.18ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನ ದಂತೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ. 16 ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಶ್ರೀದೇವಿಯ ಕಲಶಪ್ರತಿಷ್ಠೆ, ಉದಯಪೂಜೆ ಬಳಿಕ ವಿವಿಧ ತಂಡದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಉದಯಪೂಜೆ, ಶ್ರೀ ನರಸಿಂಹ ಮಂಡಲ ಪೂಜೆ, ಕಲಶಸ್ನಾನ, ತುಲಾಭಾರ ಸೇವೆ, ಶ್ರೀದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ, ಹೂವಿನಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಆಂಜನೇಯ ಮಹಾಪೂಜೆ. ನಾಗ ದರ್ಶನ, ಶ್ರೀ ದೇವಿಯ ಮಹಾಪೂಜೆ ಬಲಿ ಉತ್ಸವ ಪಲ್ಲಕ್ಕಿ ಉತ್ಸವ, ಸಿಡಿ ಮದ್ದು ಪ್ರದರ್ಶನ, ಶ್ರೀ ಸಿರಿಕುಮಾರ ಸ್ವಾಮೀಯ ಮಹಾಪೂಜೆ, ಕುಮಾರಸೇವೆ,ಪ್ರಸಾದ ವಿತರಣೆ, ಬಳಿಕ ರಕ್ತೇಶ್ವರಿ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ.
ಫೆ.18 ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಭಜನೆ, ಮಧ್ಯಾಹ್ನ ಶ್ರೀದೇವಿಯ ಮಹಾಪೂಜೆ, ದರ್ಶನಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೀಪಾರಾಧನೆ ನಡೆಯಲಿದೆ.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಸಂಸ್ಥಾಪಕ, ಆರಾಧಕರೂ ಆಗಿದ್ದ ಧರ್ಮದರ್ಶಿ ತನಿಯಪ್ಪ ಪೂಜಾರಿಯವರು ಪರಂಪರಾಗತ ಆರಾಧನಾ ಹಿನ್ನಲೆಯಿರುವ ಕುಟುಂಬದವರು. ಖ್ಯಾತ ನಾಟಿ ವೈದ್ಯರಾಗಿದ್ದ ಗುರಿಕಾರ ದಿ| ತ್ಯಾಂಪ ಪೂಜಾರಿ ಮತ್ತು ಅಕ್ಕು ಪೂಜಾರ್‍ತಿಯ ಪುತ್ರ.
ಕ್ಷೇತ್ರದ ಸಂಸ್ಥಾಪಕರೂ, ಧರ್ಮದರ್ಶಿಗಳಾಗಿದ್ದ ತನಿಯಪ್ಪ ಪೂಜಾರಿಯವರು ಬಡಕುಟುಂಬದ ಹಿನ್ನೆಲೆಯಿದ್ದವರಾಗಿದ್ದರು. ತಂದೆ ತಾಯಿ ಕುಟುಂಬ ಪುತ್ರ ಸಂತಾನದ ಅಪೇಕ್ಷೆಯಿಂದ ತಮ್ಮ ಧರ್ಮದೈವ ಧೂಮಾವತಿಯನ್ನು ದೀಪ ಹಚ್ಚಿ ಪ್ರಾರ್ಥಿಸುತ್ತಾರೆ. ಪೂರ್ವದಲ್ಲಿ ಇವರ ಕುಟುಂಬವು ಮಂತ್ರ ತಂತ್ರ ವಿದ್ಯೆಯಿಂದ ಸನ್ಯಾಸಿ ಯೋಗವನ್ನು ಪಡೆದು ಲೋಕಕಲ್ಯಾಣ ಮಾಡುತ್ತಿದ್ದ ಕುಟುಂಬವಾಗಿತ್ತು. ತಾಯಿಯ ಪ್ರಾರ್ಥನೆಯಂತೆ ಅವರಿಗೆ ಗಂಡುಮಗುವಿನ ಜನನವಾಗುತ್ತದೆ. ತನಿಯಪ್ಪ ಪೂಜಾರಿಯವರು ಬಾಲ್ಯದಿಂದಲೇ ಜಪತಪ, ಧ್ಯಾನದಲ್ಲಿ ಆಸಕ್ತರಾಗಿದ್ದರು. ಹಿರಿಯರಿಂದ ಅನೇಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು.
ಹಿರಿಯರ ಆಶೀರ್ವಾದ ಹಾಗೂ ಗ್ರಂಥ ಅಧ್ಯಯನ ದ ಅಪೇಕ್ಷೆ ಯಿಂದ ಶಕ್ತಿ ಕ್ಷೇತ್ರ ವಾದ ಕೊಲ್ಲೂರಿನ ಕೊಡಚಾದ್ರಿ ಗೆ ಹೋದ ಸಮಯದಲ್ಲಿ ಕಾಲ ನಿರ್ಣಯವೆಂಬಂತೆ ಗೋಕರ್ಣ ಕ್ಷೇತ್ರ ದಲ್ಲಿ ಪೂಜೆ ನಿರತರಾಗಿದ್ದು ಧರ್ಮಕ್ಷೇತ್ರ ನಿರ್ಮಾಣ ದ ಅತೀವ ಉದ್ದೇಶವನ್ನು ಹೊಂದಿದ್ದ ವಿಶ್ವಕರ್ಮ ಗೋತ್ರದ ಮಹಾ ತಪಸ್ವಿಯೋರ್ವರು ಕೊಡಚಾದ್ರಿ ಯಲ್ಲಿ ಮೋಕ್ಷ ಪ್ರಾಪ್ತಿಗಾಗಿ ತಪೋನಿರತರಾಗಿದ್ದರು ಈ ಸಮಯದಲ್ಲಿ ತನ್ನ ಧರ್ಮ ಉದ್ದೀಪನ ದ ಕಾರ್ಯಕ್ಕೆ ಸೂಕ್ತ ವ್ಯೆಕ್ತಿಯ ನಿರೀಕ್ಷೆ ಯಲ್ಲಿದ್ದರು ಇದೇ ಸಮಯದಲ್ಲಿ ತನಿಯಪ್ಪ ಪೂಜಾರಿ ಯವರನ್ನು ಕಂಡು ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿಯೆಂದು ಪರಿಗಣಿಸಿ ಮನೋಭಿಲಾಷೆಯನ್ನು ತಿಳಿಸಿ ಆಶೀರ್ವಾದ ಮಾಡಿದರು. ತನಿಯಪ್ಪ ಪೂಜಾರಿಯವರು ಎಳೆಯ ವಯಸ್ಸಿನಲ್ಲಿಯೇ ಧರ್ಮ, ಪುರಾಣ, ಗ್ರಂಥಗಳ ಅಧ್ಯಯನದಲ್ಲಿ ಆಸಕ್ತರಾಗಿ ದೈವಾಂಶಸಂಭೂತರಂತೆ ಕಂಡಿದ್ದರು. ಕಾಲಕ್ರಮೇಣ ಕೊಲ್ಲೂರಿಗೆ ಹೋಗಿ ಬಂದು ತಪಸ್ವಿಯ ಜ್ಞಾನಾನುಗ್ರಹದಿಂದ ಬಳಿಕ ಮನೆಯಲ್ಲಿಯೇ ದೇವಿಯ ಆರಾಧನೆ ಆರಂಭಿಸುತ್ತಾರೆ.
ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ತನಿಯಪ್ಪ ಪೂಜಾರಿಯವರ ಜೀವನದಲ್ಲಿ ನಡೆದ ಘಟನೆಗಳು ದೇವೀ ಶಕ್ತಿಯಿಂದ ಪ್ರಭಾವಿತವಾದುದು ಎಂದು ಕಂಡುಬಂದಿದೆ. ಕಾಲಕ್ರಮೇಣ ಧರ್ಮದರ್ಶಿ ತನಿಯಪ್ಪ ಪೂಜಾರಿಯವರ ಕಾಲಾನಂತರ ಅವರ ಹಿರಿಯ ಪುತ್ರ ಡಾ.ವಿಶ್ವನಾಥ ಕುಕ್ಕಾಜೆಯವರು ಕ್ಷೇತ್ರದ ಧರ್ಮದರ್ಶಿಗಳಾಗಿದ್ದರು. ಅವರ ಕಾಲಾನಂತರ ತನಿಯಪ್ಪ ಪುಜಾರಿಯವರ ಕಿರಿಯ ಪುತ್ರ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಸರ್ವಾಭಿವೃದ್ಧಿಯ ರೂವಾರಿಯಾಗಿ, ಕ್ಷೇತ್ರದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ, ಪ್ರಸಾದವನ್ನು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ.17ರಂದು ರಾತ್ರಿ ಲಯನ್ ಕಿಶೋರ್ ಡಿ. ಶೆಟ್ಟಿರವರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ‘ಎನ್ನ ಬಂಗ ಎಂಕೇ ಗೊತ್ತು’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಫೆ.18ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಮಂತ್ರ ನಾಟ್ಯಾಲಯ ಗುರುಕುಲ ಉಳ್ಳಾಲ ಪ್ರಸ್ತುತ ಪಡಿಸುವ ‘ ಶ್ರೀ ದೇವಿ ನಮಸ್ತುಭ್ಯಂ’ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆಯ ಮಕ್ಕಳಿಂದ ಭರತನಾಟ್ಯ ನಡೆಯಲಿದೆ. ಬಳಿಕ ಶ್ರೀ ವಿಷ್ಣುಮೂರ್ತಿ ಜನಾರ್ಧನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜಿನಾಡಿಯ ಬಾಲ ಕಲಾವಿದರಿಂದ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಜಗದೀಶ್ ಎಸ್.ಗಟ್ಟಿ ನಿರ್ದೇಶನದ ‘ಶಾಂಭವಿ ವಿಲಾಸ’ ಯಕ್ಷಗಾನಬಯಲಾಟ ನಡೆಯಲಿದೆ.
ಕ್ಷೇತ್ರದಲ್ಲಿ ನಾಳೆಯಿಂದ ಫೆ.18ರ ವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ. ಸಂತಾನಪ್ರಾಪ್ತಿಗಾಗಿ, ವಿವಾಹಕ್ಕೆ ಸಂಬಂಧಿಸಿ, ಚರ್ಮವ್ಯಾಧಿ, ಕ್ಯಾನ್ಸರ್ ನಂತಹ ಭಯಾನಕ ರೋಗಗಳ ಶಮನಕ್ಕಾಗಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥಿಸಿ ತುಲಾಭಾರ ಸೇವೆ ನೀಡಿದಲ್ಲಿ ತಾಯಿ ಅನುಗ್ರಹ ನೀಡಿ ಸರಿಪಡಿಸಿದ ಹಲವಾರು ನಿದರ್ಶನಗಳಿವೆ. ಅದೇ ರೀತಿ ಹೊಟ್ಟೆಯ ಒಳಗಿನ ರೋಗಗಳಿಗೆ ಕ್ಷೇತ್ರದಲ್ಲಿ ಕುಂಕುಮಾರ್ಚನೆ ಮಾಡಿಸಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡಿದರೆ ಅದು ಶಮನವಾದ ಹಲವಾರು ನಿದರ್ಶನಗಳಿವೆ. ತಾಯಿಯ ಲೀಲೆಯಿಂದ ಫಲಕಂಡುಕೊಂಡ ಊರ ಪರವೂರ ಸಹಿತ ಹೊರ ರಾಜ್ಯದ ಹಲವಾರು ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ತಾಯಿಯ ದರುಶನ ಪಡೆದುಕೊಳ್ಳುತ್ತಾರೆ.