ಮಂಗಳೂರು: ಆನ್‌ಲೈನ್ ಶಾಪಿಂಗ್ ಜಾಲತಾಣವಾದ ಫ್ಲಿಪ್‌ಕಾರ್ಟ್‌ನ ಕಸ್ಟಮರ್ ಕೇರ್ ನಂಬರ್ ಎಂದು ಭಾವಿಸಿದ ವ್ಯಕ್ತಿಯೊಬ್ಬರು ಅದೇ ನಂಬರ್‌ಗೆ ಕರೆ ಮಾಡಿ 48,354 ರೂಪಾಯಿಯನ್ನು ಕಳೆದುಕೊಂಡಿರುವುದರ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಎಲ್ಲರೂ ಕೂಡ ಆನ್‌ಲೈನ್ ಶಾಪಿಂಗ್‌ಗೆ ಮೊರೆ ಹೋಗುವುದು ಸಾಮಾನ್ಯ. ಅದೇ ರೀತಿ ನಗರದ ವ್ಯಕ್ತಿಯೊಬ್ಬರು ‘ಕೀ ಬಂಚ್’ ಒಂದನ್ನು ಆನ್‌ಲೈನ್ ಶಾಪಿಂಗ್ ಆ್ಯಪ್ ಆದ ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಅದು 12 ದಿನವಾದರೂ ಬಾರದ ಕಾರಣ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದ್ದರು. ಅಲ್ಲಿ ಸಿಕ್ಕಿದ ನಂಬರ್ ಒಂದಕ್ಕೆ ವ್ಯಕ್ತಿ ಕರೆ ಮಾಡಿದ್ದರು.
ಮೊದಲಿಗೆ ಕಾಲ್ ಸ್ವೀಕೃತವಾಗಿಲ್ಲದಿದ್ದರೂ ಮತ್ತೆ ಅದೇ ನಂಬರಿನಿಂದ ಈ ವ್ಯಕ್ತಿಗೆ ವಾಪಾಸ್ ಕರೆ ಬಂದಿದೆ. ಎನ್ನಲಾಗಿದೆ. ಆತ ‘ಎನಿ ಡೆಸ್ಕ್ ಆ್ಯಪ್’ ಡೌನ್‌ಲೋಡ್ ಮಾಡುವಂತೆ ತಿಳಿಸಿ ಇವರನ್ನು ಯಾಮಾರಿಸಿದ್ದಾನೆ.
ಅದನ್ನು ನಂಬಿದ ಇವರು ಅ್ಯಪ್ ಇನ್‌ಸ್ಟಾಲ್ ಮಾಡಿ ಆತನ ಸಲಹೆಯಂತೆ ಫ್ಲಿಪ್‌ಕಾರ್ಟ್ ಆ್ಯಪ್ ತೆರೆದು ಅದರಲ್ಲಿ ತನ್ನ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ನಮೂದಿಸಿದ್ದಾರೆ. ತಕ್ಷಣ ಖಾತೆಯಿಂದ 48354 ರೂ. ಹಂತ ಹಂತವಾಗಿ ಕಡಿತಗೊಂಡಿದೆ ಎಂದು ಆರೋಪಿಸಲಾಗಿದೆ.
ನಂಬಿ ಮೋಸ ಹೋಗಿ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.