ನವದೆಹಲಿ: 15ನೇ ಆವೃತ್ತಿ ಐಪಿಎಲ್ ಯಾವಾಗ ಆರಂಭವಾಗುವುದೆಂಬ ಕುತೂಹಲಕ್ಕೆ ಕಡೆಗೂ ತೆರೆಬಿದ್ದಿದೆ.
ಈ ಕೂಟ ಮಾ.26ರಂದು ಮುಂಬಯಿಯಲ್ಲಿ ಆರಂಭವಾಗಿ ಮೇ 29ಕ್ಕೆ ಮುಕ್ತಾಯವಾಗಲಿದೆ. ಕೂಟದ ಆರಂಭದಲ್ಲಿ ಮೈದಾನ ಸಾಮರ್ಥ್ಯದ ಶೇ.40 ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯದ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಈ ಘೋಷಣೆ ಮಾಡಿದ್ದಾರೆ. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೇರಿದೆ. ಹಾಗಾಗಿ ಬೃಹತ್ ಕೂಟವೆನಿಸಿಕೊಳ್ಳಲಿದೆ.
ತಂಡಗಳ ಸಂಖ್ಯೆ ಹೆಚ್ಚಿರುವುದರಿಂದ ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೇರಲಿದೆ. ಹಾಗಾಗಿ ಈ ಪಂದ್ಯಗಳನ್ನು ಮುಂಬಯಿ ಹಾಗೂ ಪುಣೆಯ ನಡುವೆ ಹಂಚಲಾಗುತ್ತದೆ. ಮುಂಬಯಿಯ ವಾಂಖೇಡೆ, ಬ್ರೆಬೋರ್ನ್ ಹಾಗೂ ಡಿವೈ ಪಾಟೀಲ್ ಮೈದಾನಗಳಲ್ಲಿ ಬಹುತೇಕ ಪಂದ್ಯಗಳು ನಡೆಯುತ್ತವೆ. ಬಾಕಿ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
ಮಹಾರಾಷ್ಟ್ರ ಸರಕಾರ ಯಾವ ನಿಯಮಗಳನ್ನು ಹಾಕಲಿದೆ ಎನ್ನುವುದನ್ನು ನೋಡಿಕೊಂಡು ಮೈದಾನದಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಕುಸಿದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಕೂಟದ ಅಂತ್ಯದಲ್ಲಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಅಹ್ಮದಾಬಾದ್‌ನಲ್ಲಿ ಫೈನಲ್ :
ಐಪಿಎಲ್‌ನ ಪ್ಲೇ ಆಫ್ ಪಂದ್ಯಗಳು ಎಲ್ಲಿ ನಡೆಯಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಅಂತಿಮ ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.