ವಿಟ್ಲ: ಶಿಶಿಲೇಶ್ವರ ದೇವರ ಕಾವಲು ದೈವಗಳ ಪೈಕಿ ಅತೀ ಕಾರ್ಣಿಕ ಶಕ್ತಿಯುಳ್ಳ “ದೆಸಿಲು” ದೈವಕ್ಕೆ ಹಲವಾರು ವರ್ಷಗಳಿಂದ ನೇಮಕೈಗೊಳ್ಳುತ್ತಿದ್ದ ದೈವನರ್ತಕ ಕೊಳಕ್ಕೆಬೈಲು ನಿವಾಸಿ ಲಿಂಗ ನಲ್ಕೆ(68)ಶನಿವಾರ ರಾತ್ರಿ ನಿಧನರಾದರು.
ಹಿಂದೆ ಶಿಶಿಲದ ಕುಮಾರಗುಡ್ಡೆಯ ದಟ್ಟ ಕಾನನದ ಮಧ್ಯೆ ಶಿಶಿಲೇಶ್ವರ ದೇವರ ಮೂಲನೆಲೆಯನ್ನು ಸಾಕ್ಷಾತ್ಕಾರಗೊಳಿಸಿ “ದೆಸಿಲು” ಮತ್ತು “ಕಿಲಮರತ್ತಾಯ” ಎಂಬ ದೈವಗಳಾಗಿ ಅವತರಿಸಿದ ಶ್ರೀ ಶಿಶಿಲೇಶ್ವರ ದೇವರ ಕಾವಲು ದೈವಗಳಲ್ಲಿ ಸಾಕಷ್ಟು ಕಾರ್ಣಿಕವುಳ್ಳ ದೆಸಿಲು ದೈವಕ್ಕೆ ಲಿಂಗ ನಲ್ಕೆಯವರು ದೈವನರ್ತಕರಾಗಿ ನೇಮ ಕೈಗೊಳ್ಳುತ್ತಿದ್ದರು.
ಮೃತರು ಪತ್ನಿ (ಮಾಜಿ ಗ್ರಾಮ ಪಂ. ಉಪಾಧ್ಯಕ್ಷೆ ಅಮ್ಮು, ಪಂಪ್ ಆಪರೇಟರ್ ಲೋಕೇಶ್, ಸಹೋದರ ಕಿಲಮರತ್ತಾಯ ದೈವ ಸೇವಾರ್ತೃ ನಾರ್ಣ ನಲ್ಕೆ ಹಾಗೂ ಅಳಿಯ ಪದವಿ ಕಾಲೇಜಿನ ಉಪನ್ಯಾಸಕ, ಸಾಹಿತಿ, ಚಲನಚಿತ್ರ ನಿರ್ದೇಶಕ ಬಿ.ಎ.ಲೋಕಯ್ಯ ಶಿಶಿಲ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಶ್ರೀನಿವಾಸ ಮೂಡತ್ತಾಯ, ಗ್ರಾಮ ಪಂ.ಅಧ್ಯಕ್ಷ ಸಂದೀಪ್ ಗೌಡ, ಸಿಬ್ಬಂದಿ ವರ್ಗ ಮತ್ತು ಊರಿನ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.