ಬೆಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಕೆಲವು ದಿನಗಳಿಂದ ನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ಕೈದು ವರ್ಷಗಳಿಂದ ಯಾರ ಜೊತೆಯೂ ಮಾತನಾಡದ ಅವರು, ಕೇವಲ ರವಿಚಂದ್ರನ್ ಧ್ವನಿಯನ್ನ ಮಾತ್ರ ಕಂಡು ಹಿಡಿಯುತ್ತಿದ್ದರು. ನನ್ನಮ್ಮ ನನ್ನ ಗೆಲುವನ್ನು ಮತ್ತೊಮ್ಮೆ ನೋಡಿಯೇ ನಮ್ಮನ್ನ ಅಗಲುತ್ತಾರೆ ಎಂದು ರವಿಚಂದ್ರನ್ ಹೇಳುತ್ತಿದ್ದರು. ಈಗ ತಾಯಿಯ ಅಗಲಿಕೆ ರವಿಚಂದ್ರನ್ ಹಾಗೂ ಕುಟುಂಬದವರನ್ನು ನೋವಿನ ಮಡುವಿಗೆ ನೂಕಿದೆ.
ಇನ್ನು ಪಟ್ಟಮ್ಮಾಳ್ ವೀರಸ್ವಾಮಿ ಅವರು ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗದ ಅನೇಕರು ಸೇರಿದಂತೆ ಇತರೆ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ.