ಕಡಬ: ಯುವಕನೋರ್ವ ಮಾಡಿದ ಫಜೀತಿಗೆ ಆತನ ಸ್ನೇಹಿತರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕಡಬದಲ್ಲಿ ನಡೆದಿದೆ.
ಯುವಕನೋರ್ವ ತನ್ನ ಹದಿನೈದಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಯೊಬ್ಬಳಿಗೆ ಸಂದೇಶ ಮಾಡಿದ್ದು, ಯುವತಿಯ ದೂರಿನ ಮೇರೆಗೆ ಹಲವರನ್ನು ಪೊಲೀಸರು ವಿಚಾರಣೆಗೆ ಕರೆದಿರುವ ಘಟನೆ ನಡೆದಿದೆ.
ಕೊಕ್ಕಡ ಮೂಲದ ಯುವಕ ಕಡಬದ ಯುವತಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಬಳಿಕ ವೈಮನಸು ಉಂಟಾಗಿ ಆತನ ಕರೆ ಮತ್ತು ಸಂದೇಶ ಬಾರದಂತೆ ಯುವತಿ ಬ್ಲಾಕ್ ಮಾಡಿದ್ದಳು. ಹೀಗಾಗಿ ಯುವಕ ಹೋದಲ್ಲೆಲ್ಲ ಸಿಗುವ ಸ್ನೇಹಿತರ ಬಳಿ ‘ತುರ್ತು ಕರೆ ಮಾಡಲು ಇದೆ” , ಪೋನ್ ಜಾರ್ಜ್ ಖಾಲಿಯಾಗಿದೆ, ಎಂದೆಲ್ಲಾ ಹೇಳಿ, ಮೊಬೈಲ್ ಪಡೆದು ಆಕೆಗೆ ಸಂದೇಶ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದ. ಹೀಗೆ 15ಕ್ಕೂ ಅಧಿಕ ತನ್ನ ಆಪ್ತರ ಪೋನ್ ಬಳಸಿ ಸಂದೇಶ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹೊಸ ಹೊಸ ನಂಬರ್ ಗಳಿಂದ ನಿರಂತರ ಮೆಸೆಜ್ ಬರುತ್ತಿರುವುದನ್ನು ಮನಗಂಡ ಯುವತಿಯು ಠಾಣೆಗೆ ದೂರು ನೀಡಿದ್ದು, ಮೆಸೇಜ್ ಆಧಾರಿಸಿ ಪೊಲೀಸರು ಹಲವರನ್ನು ಠಾಣೆಗೆ ಕರೆಸಿದ್ದು, ಪೊಲೀಸರ ಪೋನ್ ಕರೆಗೆ ಭಯಗೊಂಡರೂ ಕೆಲವರು ಠಾಣೆಗೆ ವಿಚಾರ ತಿಳಿದುಕೊಳ್ಳಲು ಆಗಮಿಸಿದ್ದು, ಈ ವೇಳೆ ಮಾಡದ ತಪ್ಪಿಗೆ ಠಾಣೆಗೆ ಹೋಗುವಂತೆ ಮಾಡಿದ ಯುವಕನ ವಿರುದ್ದ ಕೆಲವರು ಕೋಪಗೊಂಡು ಠಾಣೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಗಿತ್ತು. ಯುವತಿಗೆ ಸಂದೇಶ ಮಾಡಿರುವ ವಿಚಾರವನ್ನು ಯುವಕ ಒಪ್ಪಿಕೊಂಡಿದ್ದು, ಆತನ ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದಾರೆ.