ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಜೂನ್ 1ರಂದು ಬೆಳಿಗ್ಗೆ ಪತ್ತೆಯಾದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪೆರ್ನೆಯ ನಿವಾಸಿ ದಿ. ಕೂಸಪ್ಪ ಗೌಡ ಹಾಗೂ ಪದ್ಮಾವತಿ ದಂಪತಿಯ ಎರಡನೇ ಪುತ್ರ ಯತೀಶ್ ಗೌಡ (32) ಎಂದು ಗುರುತಿಸಲಾಗಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಆಗಾಗ ಮನೆ ಬಿಟ್ಟು ತೆರಳುತ್ತಿದ್ದರು. ಸುಮಾರು ಎರಡು ತಿಂಗಳ ಹಿಂದೆ ಮನೆ ತೊರೆದು ಹೋಗಿದ್ದ ಅವರು ಬಳಿಕ ಕುಟುಂಬದ ಸಂಪರ್ಕಕ್ಕೆ ಬಂದಿರಲಿಲ್ಲ. ಇದೀಗ ಅವರ ಮೃತದೇಹ ಗುರುವಾಯನಕೆರೆ ಸಮೀಪದ ಶ್ರೀದೇವಿ ಹಾರ್ಡ್‌ವೇರ್ ಬಳಿ ಪತ್ತೆಯಾಗಿದೆ.
ಮೃತದೇಹ ಪತ್ತೆಯಾದ ಬಳಿಕ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಯತೀಶ್ ಅವರ ಗುರುತು ಖಚಿತಪಡಿಸಿದ್ದಾರೆ. ಯತೀಶ್ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು, ಸಾವಿನ ಹಿಂದೆ ದುಷ್ಕೃತ್ಯದ ಅನುಮಾನ ವ್ಯಕ್ತವಾಗಿದೆ.
ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಯತೀಶ್ ಅವರನ್ನು ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.




























