ಪುತ್ತೂರು: ಕೌಟುಂಬಿಕ ಕಿರುಕುಳದಿಂದಾಗಿ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತೆಯ ಮಾವ, ಅತ್ತೆ ಹಾಗೂ ನಾದಿನಿ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದ್ (43) ಅವರ ಪುತ್ರಿ ಫಾತಿಮತ್ ನಿಶಾನ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ಜು.18ರಂದು ರಾತ್ರಿ ಫಾತಿಮತ್ ನಿಶಾನ ಅವರು ತಾಯಿಗೆ ಕರೆ ಮಾಡಿ, ತನ್ನ ಮಾವ, ಅತ್ತೆ, ಹಾಗೂ ನಾದಿನಿ ಅವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನಲೆಯಲ್ಲಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಸದ್ಯ ಮೃತ ಮಹಿಳೆಯ ಮಾವ, ಅತ್ತೆ ಹಾಗೂ ನಾದಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 85, 103(1) ಹಾಗೂ 3(5)ರಡಿ ದಾಖಲಾಗಿರುವ ಪ್ರಕರಣದಲ್ಲಿ ಮೃತ ಮಹಿಳೆಯ ಮಾವ ಸಿ.ಪಿ. ಅಳವಿ (54), ಅತ್ತೆ ಅಯಿಷಾ ಸಿ.ಎ. ಮತ್ತು ನಾದಿನಿ ಫಸಿಲಾ ಸಿ.ಎ. (29) ಅವರನ್ನು ಜುಲೈ 22ರಂದು ಸುಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



























