ಪುತ್ತೂರು, ಸೆ.5: ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳ ಮೇಲೆ ವ್ಯಕ್ತಿಯೋರ್ವ ಹಾಗೂ ಆತನ ತಾಯಿ ಮತ್ತು ಸಹೋದರ ಸೇರಿ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆಯಲ್ಲಿ ಸೆ.4ರ ರಾತ್ರಿ ನಡೆದಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಹೆಚ್‌ಸಿ ಮಧು ಹಾಗೂ ಸಿಪಿಸಿ ಭೀಮನ ಗೌಡ ಎಂ. ಬಿರಾದರ್ ಅವರು ಹೊಯ್ಸಳ ವಾಹನದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ದೂರು ಸ್ವೀಕರಿಸಿ ಮುಂಡಾಜೆಗೆ ತೆರಳಿದ್ದರು. ಸ್ಥಳಕ್ಕೆ ತೆರಳಿದಾಗ ಮಹಿಳೆಯೊಬ್ಬರು ತನ್ನ ಪತಿ ತನಗೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಪತಿ ನವೀನ್ ಎಂಬವರ ಬಳಿ ವಿಚಾರಣೆ ನಡೆಸುತ್ತಿದ್ದ ವೇಳೆ ಆತ ಕೋಪಗೊಂಡು ತನ್ನ ಪತ್ನಿಗೆ ಮತ್ತೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಗಳ ಮೇಲೆ ನವೀನ್, ಆತನ ತಾಯಿ ಹಾಗೂ ಸಹೋದರ ಸೇರಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಂತೆ **ಬಿಎನ್‌ಎಸ್ 2023ರ ಕಲಂ 352, 132, 121(1) ಜೊತೆಗೆ 3(5)**ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣದ ಆರೋಪಿ ನವೀನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯಿಂದ ಬಿಡುಗಡೆಯಾದ ಬಳಿಕ ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





























