ಮುಕ್ಕೂರು: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲದ ವತಿಯಿಂದ ವಿಭಿನ್ನ ರೀತಿಯಲ್ಲಿ ಗೌರವಾರ್ಪಣೆ ನಡೆಯಿತು. ಯಾವುದೇ ಪೂರ್ವಮಾಹಿತಿ ನೀಡದೆ ಮುಕ್ಕೂರು ಅಂಗನವಾಡಿಗೆ ತೆರಳಿದ ಬಳಗದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ರೂಪಾ ಹಾಗೂ ಸಹಾಯಕಿ ಪ್ರೇಮಾ ಕಂರ್ಬುತ್ತೋಡಿ ಅವರನ್ನು ಸಮ್ಮಾನಿಸಿದರು.
ಸೆ.5 ರಂದು ಅಂಗನವಾಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿತಾನ ನ್ಯಾಚುರಲ್ಸ್ ಸಂಸ್ಥೆಯ ಮುಖ್ಯಸ್ಥೆ ಶ್ವೇತಾ ಕಾನಾವು ಸಮ್ಮಾನ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ಆರಂಭಿಕ ಶಿಕ್ಷಣ, ಆರೈಕೆ ಹಾಗೂ ಪೋಷಣೆಯ ಜವಾಬ್ದಾರಿ ನಿರ್ವಹಿಸುವ ಅಂಗನವಾಡಿ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಮಕ್ಕಳ ಶಿಕ್ಷಣದ ಮೊದಲ ಹೆಜ್ಜೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪಾತ್ರ ಮಹತ್ವದ್ದಾಗಿದೆ. ಅವರ ಸೇವೆಯನ್ನು ಗುರುತಿಸಿ ಶಿಕ್ಷಕರ ದಿನಾಚರಣೆಯಂದು ಗೌರವ ಸಲ್ಲಿಸಿರುವುದು ಅರ್ಥಪೂರ್ಣ ಎಂದರು.
ಸಮ್ಮಾನ ಸ್ವೀಕರಿಸಿದ ಅಂಗನವಾಡಿ ಕಾರ್ಯಕರ್ತೆ ರೂಪಾ ಮಾತನಾಡಿ, ಯಾವುದೇ ಪೂರ್ವಮಾಹಿತಿ ನೀಡದೆ ಅಚ್ಚರಿಯ ರೀತಿಯಲ್ಲಿ ನೇಸರ ಸಂಸ್ಥೆ ಗೌರವಿಸಿರುವುದು ಸಂತಸ ತಂದಿದೆ. ಇಂತಹ ಯೋಚನೆ ನೇಸರದಿಂದ ಮಾತ್ರ ಸಾಧ್ಯವಿದೆ. ಈ ಗೌರವ ಮತ್ತಷ್ಟು ಉತ್ಸಾಹದಿಂದ ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕಿ ತೇಜಸ್ವಿನಿ, ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು, ಉಪಾಧ್ಯಕ್ಷ ಭರತ್ ಬೊಣ್ಯಕುಕ್ಕು, ಕೋಶಾಧಿಕಾರಿ ಶ್ರೀಧರ ಗೌಡ ಕೊಂಡೆಪ್ಪಾಡಿ, ಜತೆ ಕಾರ್ಯದರ್ಶಿ ಪ್ರವೀಣ್ ಬೋಳಕುಮೇರು, ಸದಸ್ಯರಾದ ರವಿ ಕುಂಡಡ್ಕ, ಜಯಂತ ಗೌಡ ಕುಂಡಡ್ಕ, ರಾಮಚಂದ್ರ ಚೆನ್ನಾವರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ, ನೇಸರ ಯುವತಿ ಮಂಡಲದ ಕಾರ್ಯದರ್ಶಿ ಚೈತನ್ಯ ಕುವೆತಡ್ಕ, ಸದಸ್ಯರಾದ ಕಾವ್ಯ ಕುವೆತಡ್ಕ, ಶಶಿಪ್ರಭಾ ರಾಮಚಂದ್ರ, ರೇಣುಕಾ ಕುವೆತಡ್ಕ ಹಾಗೂ ಪುಣ್ಯ ಕುಂಡಡ್ಕ ಉಪಸ್ಥಿತರಿದ್ದರು.
ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪ್ರಪುಲ್ ಪೂಜಾರಿ ಮುಕ್ಕೂರು ಸ್ವಾಗತಿಸಿದರು. ನೇಸರ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ತೇಜಸ್ವಿತ್ ಅಡ್ಯತಕಂಡ ನಿರೂಪಿಸಿದರು.





























