ಕಡಬ: ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಚಾರ್ವಾಕ ಗ್ರಾಮದ ಪದ್ಮನಾಭ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 ವರ್ಷದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಮನೆಗೆ ಬರುವ ವೇಳೆ ಆರೋಪಿ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಮನೆಯವರು ಎಚ್ಚರಿಕೆ ನೀಡಿದರೂ ವರ್ತನೆ ಮುಂದುವರಿಸಿದ್ದು, ಜುಲೈ 29ರಂದು ಯುವತಿಯ ತಾಯಿ ಹಾಗೂ ಅಕ್ಕನಿಗೆ ಕೇಳಿಸುವಂತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಗಸ್ಟ್ 10ರಂದು ಮತ್ತೆ ಯುವತಿಯನ್ನು ಹಿಂಬಾಲಿಸಿ, ಆಕೆಯ ಅಕ್ಕನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಆಗಸ್ಟ್ 11ರಂದು ಯುವತಿ ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಅಪರಾಧ ಸಂಖ್ಯೆ 96/2026ರಲ್ಲಿ BNS ಕಲಂ 78(2) ಹಾಗೂ 351(2)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




























