ಬೆಳ್ತಂಗಡಿ: ಹೋಟೆಲ್ ಬಂದ್ ಮಾಡುವ ವೇಳೆ ನುಗ್ಗಿದ 5 ಜನರ ಗುಂಪೊಂದು ಕುಟುಂಬ ಸದಸ್ಯರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಮಹಿಳೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕವು ಎಂಬಲ್ಲಿ ನಡೆದಿದೆ.
ಆ.6 ರಂದು ರಾತ್ರಿ 9 ಗಂಟೆಗೆ ನಡೆದ ಈ ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸರು ಆ.12 ರಂದು 5 ಮಂದಿ ಆರೋಪಿಗಳ ವಿರುದ್ಧ BNS ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿವರ: ಮಿತ್ತಬಾಗಿಲು ಕುಕ್ಕಾವು ಎಂಬಲ್ಲಿ 45 ವರ್ಷದ ಮಹಿಳೆ ಮತ್ತು 28 ವರ್ಷದ ಮಗ ಹೋಟೆಲ್ ನಡೆಸುತ್ತಿದ್ದಾರೆ. ಆ.6 ರಂದು ರಾತ್ರಿ ಹೋಟೆಲ್ ಬಂದ್ ಮಾಡುತ್ತಿದ್ದ ವೇಳೆ ಇಂದಬೆಟ್ಟುವಿನ ನವೀನ್ ಕೊಟ್ಯಾನ್, ಮಲವಂತಿಗೆಯ ರಂಜಿತ್, ವಿಜೇಶ್ ಪೂಜಾರಿ, ಮಿತ್ತಬಾಗಿಲಿನ ಸುದೇಶ್ @ ಸುದ ಮತ್ತು ಕಿಲ್ಲೂರಿನ ಹರೀಶ್ ಎಂಬವರು ಹೋಟೆಲ್‌ಗೆ ಬಂದಿದ್ದಾರೆ.
ಈ ವೇಳೆ ನವೀನ್ ಕೊಟ್ಯಾನ್ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಯ ಪತಿ ಮತ್ತು ಮಗನ ಮೇಲೆ ರಂಜಿತ್ ಹಲ್ಲೆಗೆ ಮುಂದಾಗಿದ್ದಾನೆ. ತಡೆಯಲು ಬಂದವರ ಮೇಲೆ ಅಂಗಿಯೊಳಗೆ ಅಡಗಿಸಿಟ್ಟಿದ್ದ ಸ್ಟೀಲ್ ರಾಡ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ.
ಆರೋಪಿಗಳು ಮಹಿಳೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಕಿರುಕುಳ ನೀಡಿದ್ದಾರೆ. ಜೀವ ಬೆದರಿಕೆ ಹಾಕಿ ಹೋಟೆಲ್ ಸಾಮಗ್ರಿಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಕೇಸ್: ಬೆಳ್ತಂಗಡಿ ಪೊಲೀಸರು ಪ್ರಾಥಮಿಕ ತನಿಖೆ ಬಳಿಕ ನವೀನ್ ಕೊಟ್ಯಾನ್, ರಂಜಿತ್, ವಿಜೇಶ್ ಪೂಜಾರಿ, ಸುದೇಶ್ @ ಸುದ, ಹರೀಶ್ ಅವರ ಮೇಲೆ BNS -ರ ಅಡಿಯಲ್ಲಿ 189(2), 189(4), 191(2), 115(2), 118(1), 76, 352, 351(2), 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




























